ಮುಂಬೈ: ಸಂಗಾತಿ ಅರಸುತ್ತಾ ಮೂರು ವರ್ಷದ ಗಂಡು ಹುಲಿಯೊಂದು ರಾತ್ರಿವೇಳೆ ಬರೋಬ್ಬರಿ 1,500 ಕಿಲೋ ಮೀಟರ್ ದೂರ ಸಂಚರಿಸಿದೆ.
ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಆರು ರಾಜ್ಯಗಳಲ್ಲಿ ಕೇವಲ 150 ದಿನಗಳಲ್ಲಿ ಈ ಹುಲಿ ಇಷ್ಟು ದೂರ ಕ್ರಮಿಸಿ ದಾಖಲೆ ನಿರ್ಮಿಸಿದೆ. ಈ ಹಿಂದೆ ಯಾವುದೇ ಪ್ರಾಣಿ ಇಷ್ಟೊಂದು ಕಡಿಮೆ ಅವಧಿಯಲ್ಲಿ ಈ ದೂರ ಕ್ರಮಿಸಿರುವ ದಾಖಲೆ ಸಿಗುವುದಿಲ್ಲ. ಈ ವ್ಯಾಘ್ರನಿಗೆ 'ಟಿ1ಸಿ1' ಎಂದು ಹೆಸರಿಡಲಾಗಿದ್ದು, ಅದಕ್ಕೆ ಅಳವಡಿಸಲಾಗಿದ್ದ ರೇಡಿಯೋ ಕೂಲರ್ನಿಂದ ಈ ವಿಚಾರ ಗೊತ್ತಾಗಿದೆ.
ಜೂನ್ ತಿಂಗಳಿಂದ ಈ ಹುಲಿ ಬಗ್ಗೆ ಮಾಹಿತಿ ಸಂಗ್ರಹಿಸಲು ಶುರು ಮಾಡಿದ್ದೇವೆ ಎಂದು ಮಹಾರಾಷ್ಟ್ರ ಅರಣ್ಯ ಇಲಾಖೆ ಮುಖ್ಯ ಅಧೀಕ್ಷಕ ನಿತಿನ್ ಕಾಕೋಡ್ಕರ್ ತಿಳಿಸಿದ್ರು. ಜತೆಗೆ ಇಷ್ಟು ದಿನದಲ್ಲಿ ಹುಲಿ ಯಾವುದೇ ವ್ಯಕ್ತಿಗೂ ತೊಂದರೆ ಮಾಡಿಲ್ಲ ಅನ್ನೋದು ವಿಶೇಷ.
ಹೆಣ್ಣು ಹುಲಿಗೋಸ್ಕರ ಈ ರೀತಿ ಅಲೆದಾಟ ನಡೆಸಿದ್ದು, ಸದ್ಯ ಅಜಂತಾದ ಅರಣ್ಯ ಪ್ರದೇಶದಲ್ಲಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.