ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಜೂನ್ ಅಂತ್ಯದ ವೇಳೆಗೆ ವಿಸ್ತರಣೆ ಆಗಲಿದ್ದು, ಜೆಡಿಯುನ ಮೂವರು ನಾಯಕರು ಕ್ಯಾಬಿನೆಟ್ ಸೇರಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಜನತಾದಳ (ಯುನೈಟೆಡ್) ನಾಯಕರಾದ ಲಲನ್ ಸಿಂಗ್, ರಾಮ್ ನಾಥ್ ಠಾಕೂರ್ ಮತ್ತು ಚಂದ್ರಶೇಖರ್ ಚಂದ್ರವಂಶಿ ಅವರನ್ನು ಮೋದಿ ಅವರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಲಲನ್ ಸಿಂಗ್ ಅವರು ಕ್ಯಾಬಿನೆಟ್ ಸಚಿವ ಸ್ಥಾನವನ್ನು ಪಡೆಯುವ ಸಾಧ್ಯತೆಯಿದ್ದರೆ, ಠಾಕೂರ್ ಮತ್ತು ಚಂದ್ರವಂಶಿ ಕೇಂದ್ರ ರಾಜ್ಯ ಸಚಿವರಾಗಬಹುದು ಎನ್ನಲಾಗಿದೆ.
ಈ ಹೆಸರುಗಳನ್ನು ಮೋದಿಯವರ ಸಂಪುಟದಲ್ಲಿ ಸೇರಿಸಲು ಜೆಡಿಯು ಮತ್ತು ಬಿಜೆಪಿಯ ಉನ್ನತ ನಾಯಕರು ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಲನ್ ಸಿಂಗ್ ಒಬ್ಬ ಭೂಮಿಹಾರ್ ಜಾತಿಗೆ ಸೇರಿದವರಾಗಿದ್ದು, ಠಾಕೂರ್ ಮತ್ತು ಚಂದ್ರವಂಶಿ ಹಿಂದುಳಿದ ಜಾತಿಗೆ ಸೇರಿದವರಾಗಿದ್ದಾರೆ. ರಾಜ್ಯ ರಾಜಕಾರಣವು ಇನ್ನೂ ಜಾತಿ ಆಧಾರಿತ ಆಗಿರುವುದರಿಂದ, ರಾಜ್ಯ ಚುನಾವಣೆಗಳಲ್ಲಿ ಲಾಭ ಪಡೆಯಲು ಕ್ಯಾಬಿನೆಟ್ ವಿಸ್ತರಣೆಯಲ್ಲಿ ಜಾತಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.