ಕರ್ನಾಲ್: ಹರಿಯಾಣದ ಕರ್ನಾಲ್ನಲ್ಲಿ ರಾಜೀವ್ ಗುಪ್ತ ಎಂಬ ವೈದ್ಯರನ್ನು ಗುಂಡಿಕ್ಕೆ ಹತ್ಯೆಗೈದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸ್ವಂತ ಆಸ್ಪತ್ರೆ ಹೊಂದಿರುವ ಡಾ. ರಾಜೀವ್ ಗುಪ್ತಾ ಅವರು ಸೆಕ್ಟರ್ 16ನೇ ಚೌಕ್ ಬಳಿ ಕಾರಿನಲ್ಲಿ ತೆರೆಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ತೀವ್ರವಾಗಿ ಗಾಯಗೊಂಡ ಗುಪ್ತ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ಬೆನ್ನಟ್ಟಿದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಂಧಿತರನ್ನು ಕರ್ನಾಲ್ ನಿವಾಸಿಗಳಾದ ಪವನ್, ರಮಣ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ 10 ವರ್ಷಗಳಿಂದ ಗುಪ್ತಾ ಅಮೃತಧಾರ ಆಸ್ಪತ್ರೆ ನಡೆಸುತ್ತಿದ್ದರು. ಪವನ್ ಎಂಬಾತ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸದಲ್ಲಿ ವ್ಯತ್ಯಾಸವಾಗಿದ್ದರಿಂದ ಕಳೆದ ಡಿಸೆಂಬರ್ ತಿಂಗಳಂದು ಪವನ್ನನ್ನು ಸೇವೆಯಿಂದ ವಜಾಗೊಳಿಸಿದ್ದರು. ಬೇರೆ ಎಲ್ಲಿಯೂ ಕೆಲಸ ಸಿಗದಂತಹ ಸನ್ನಿವೇಶವನ್ನು ಗುಪ್ತಾ ಸೃಷ್ಟಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ನಗರದಲ್ಲಿ ಎಲ್ಲಿಯೂ ಪವನ್ಗೆ ಕೆಲಸ ಸಿಗಲಿಲ್ಲ. ಆಕ್ರೋಶಗೊಂಡ ಪವನ್, ತನ್ನ ಇಬ್ಬರ ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.