ಪಟಾನ್ (ಗುಜರಾತ್): ಜಲ್ಲೆಯ ಜಮೀನೊಂದರಲ್ಲಿ ಮೂವರು ರೈತರು ಉಳುಮೆ ಮಾಡುತ್ತಿದ್ದ ವೇಳೆ ರಸ್ತೆಯಿಂದ ಜಮೀನಿಗೆ ನುಗ್ಗಿದ ಕಾರು ಮೂವರನ್ನೂ ಬಲಿ ಪಡೆದಿರುವ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಎಸ್ಯುವಿ ಕಾರು ಅತೀ ವೇಗವಾಗಿ ಜಮೀನಿನೊಳಗೆ ನುಗ್ಗಿದ ಪರಿಣಾಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಲ್ಯಾಣಪುರ ಗ್ರಾಮಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಇನ್ನು ಕಾರು ಡಿಕ್ಕಿಯಾದ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ರೈತರನ್ನು ಧಾನಾಭಾಯ್ ಠಾಕೂರ್ (30), ಪ್ರಭು ಠಾಕೂರ್ (35) ಮತ್ತು ನಭಾ ಠಾಕೂರ್ (40) ಎಂದು ಗುರುತಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.
ಇತ್ತ ಅಪಘಾತಕ್ಕೆ ಕಾರಣವಾದ ಕಾರು ಕಚ್ನಿಂದ ಪಾಲನ್ಪುರಕ್ಕೆ ಪ್ರಯಾಣ ಬೆಳೆಸಿತ್ತು. ಕಾರು ಚಾಲಕನ ವಿರುದ್ಧ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.