ನವದೆಹಲಿ: ಕಳೆದ ಕೆಲ ತಿಂಗಳಿಂದ ದೇಶದಲ್ಲಿ ಆರ್ಥಿಕ ಹಿಂಜರಿತ, ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ ಎಂಬ ವರದಿ ಬರುತ್ತಿದೆ. ಈ ಬಗೆಗಿಗನ ಚರ್ಚೆಗಳಿಗೆ ಇದೀಗ ಕೇಂದ್ರ ಕಾನೂನು ಸಚಿವ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ್ದಾರೆ.
ದೇಶದಲ್ಲಿ ಅಕ್ಟೋಬರ್ 2ರಂದು ರಿಲೀಸ್ ಆಗಿರುವ ಮೂರು ಸಿನಿಮಾಗಳು 120 ಕೋಟಿ ರೂ ಗಳಿಕೆ ಮಾಡಿವೆ. ಹಾಗಾದರೆ ದೇಶದಲ್ಲಿ ಆರ್ಥಿಕ ಹಿಂಜರಿತ ಎಲ್ಲಿದೆ ಹೇಳಿ ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿ ಸಿನಿಮಾಗಳು ಉತ್ತಮ ವಹಿವಾಟು ನಡೆಸ್ತಿವೆ. ಒಳ್ಳೆಯ ಆರ್ಥಿಕತೆ ಹೊಂದಿರುವ ದೇಶದಲ್ಲಿ ಮಾತ್ರ ಒಂದೇ ದಿನದಲ್ಲಿ ಇಷ್ಟೊಂದು ಹಣ ಗಳಿಕೆ ಸಾಧ್ಯವಿದೆ ಎಂದು ಕೇಂದ್ರ ಸಚಿವರು ಟೀಕಾಕಾರರಿಗೆ ತಿರುಗೇಟು ನೀಡಿದ್ರು.
ಅಕ್ಟೋಬರ್ 2ರಂದು ತೆರೆ ಕಂಡಿರುವ 'ಸೈರಾ ನರಸಿಂಹರೆಡ್ಡಿ', 'ಜೋಕರ್' ಹಾಗೂ 'ವಾರ್' ಸಿನಿಮಾ ಇಷ್ಟೊಂದು ಹಣ ಗಳಿಕೆ ಮಾಡಿವೆ ಎಂದು ತಿಳಿಸಿದರು.
ನಿರುದ್ಯೋಗ ಕುರಿತು ನ್ಯಾಷನಲ್ ಸ್ಯಾಂಪಲ್ ಸರ್ವೆ ಕಚೇರಿ ನೀಡಿರುವ ವರದಿ ಸುಳ್ಳು ಎಂದ ರವಿಶಂಕರ್ ಪ್ರಸಾದ್, ನಾವು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದ ವೇಳೆ ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸ ನೀಡುತ್ತೇವೆ ಎಂದು ಭರವಸೆ ನೀಡಿಲ್ಲ. ನಾನು ನೀಡಿರುವ 10 ದತ್ತಾಂಶಗಳಲ್ಲಿ ಒಂದೂ ಕೂಡಾ ಎನ್ಎಸ್ಎಸ್ಒ ವರದಿಯಲ್ಲಿಲ್ಲ. ಕೆಲವರು ದೇಶದ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.