ಲಖನೌ: ಅಯೋಧ್ಯೆಯಲ್ಲಿ ಜನವರಿ 26 ರಿಂದ ಮಸೀದಿ ನಿರ್ಮಾಣ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮ ತುಂಬಾ ಸರಳವಾಗಲಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ಕಾರ್ಯದರ್ಶಿ ಅಥರ್ ಹುಸೇನ್ ಭಾನುವಾರ ಹೇಳಿದ್ದಾರೆ. ಈ ಸಂದರ್ಭ ಮಂಡಳಿಯ ಎಲ್ಲ 9 ಸದಸ್ಯರು ಉಪಸ್ಥಿತರಿರುತ್ತಾರೆ. ಭಾನುವಾರ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್‌ನ ವರ್ಚುಯಲ್ ಸಭೆ ಇತ್ತು. ಅದರಲ್ಲಿ ಎಲ್ಲ ಒಂಬತ್ತು ಟ್ರಸ್ಟಿಗಳು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ವಹಿಸಿದ್ದರು. ಅಯೋಧ್ಯಾ ಜಿಲ್ಲಾ ಮಂಡಳಿಯ ಅನುಮೋದನೆ ಮತ್ತು 5 ಎಕರೆ ಜಮೀನಿನ ಮಣ್ಣಿನ ಪರೀಕ್ಷೆ ಪ್ರಕ್ರಿಯೆಯನ್ನು ಜನವರಿ 23 ರಿಂದ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ ಎಂದು ಅಥರ್ ಹುಸೇನ್ ಹೇಳಿದ್ದಾರೆ
ಮಸೀದಿ ಭೂಮಿಯಲ್ಲಿ ಧ್ವಜಾರೋಹಣ:
ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಈ ವರ್ಷ ಗಣರಾಜ್ಯೋತ್ಸವವನ್ನು ಧನೀಪುರ ಮಸೀದಿ ಯೋಜನೆಯ ಪ್ರಾರಂಭದೊಂದಿಗೆ ಆಚರಿಸಲಿದೆ ಎಂದು ಅಥರ್ ಹುಸೇನ್ ಹೇಳಿದ್ದಾರೆ. ಮಸೀದಿ ನಿರ್ಮಾಣದ ಜೊತೆಗೆ ಆಸ್ಪತ್ರೆ, ವಸ್ತುಸಂಗ್ರಹಾಲಯ, ಗ್ರಂಥಾಲಯ, ಸಮುದಾಯ ಅಡುಗೆಮನೆ, ಇಂಡೋ ಇಸ್ಲಾಮಿಕ್ ಸಾಂಸ್ಕೃತಿಕ ಸಂಶೋಧನಾ ಕೇಂದ್ರ ನಿರ್ಮಿಸಲಾಗುವುದು.
ಜನವರಿ 26 ರಂದು ಬೆಳಿಗ್ಗೆ 8.30 ಕ್ಕೆ ಧನೀಪುರ ಮಸೀದಿ ಯೋಜನೆಯ 5 ಎಕರೆ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು ಎಂದು ಅಥರ್ ಹುಸೇನ್ ತಿಳಿಸಿದ್ದಾರೆ. ಇದರ ನಂತರ ಸದಸ್ಯರು, ಟ್ರಸ್ಟಿಗಳು ಮತ್ತು ಐಐಸಿಎಫ್ ಮುಖ್ಯ ಟ್ರಸ್ಟಿಗಳು ಸಸಿಗಳನ್ನು ನೆಡುತ್ತಾರೆ. ಕೊನೆಯಲ್ಲಿ ಟ್ರಸ್ಟಿಗಳು ಮಸೀದಿಗೆ ಅಡಿಪಾಯ ಹಾಕುತ್ತಾರೆ.