ನವದೆಹಲಿ: ಕೊರೊನಾ ವಿರುದ್ಧ ನಿರಂತರ ಹೋರಾಟದಲ್ಲಿರುವ ವೈದ್ಯಕೀಯ ಸಿಬ್ಬಂದಿಯನ್ನು ಗೌರವಿಸುವ ಮತ್ತು ಅಭಿನಂದಿಸುವ ಸಂಕೇತವಾಗಿ ಭಾರತೀಯ ವಾಯುಪಡೆಯ ವಿಮಾನಗಳು ನಾಳೆ ದೇಶದ ವಿವಿಧ ಕೊರೊನಾ ವಾರಿಯರ್ಸ್ ಮೇಲೆ ಹೂಮಳೆಗರೆಯಲಿವೆ.
ನಿನ್ನೆಯಷ್ಟೇ ಭಾರತೀಯ ಸೇನಾ ಮುಖ್ಯಸ್ಥರು ಹಾಗೂ ರಕ್ಷಣಾ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ದೇಶದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸುವ ಸಲುವಾಗಿ ಹೆಲಿಕಾಪ್ಟರ್ಗಳಲ್ಲಿ ಹೂಮಳೆ ಸುರಿಯುವ ನಿರ್ಧಾರಕ್ಕೆ ಬರಲಾಗಿತ್ತು. ಈ ಬಗ್ಗೆ ಭಾರತದ ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್ )ಬಿಪಿನ್ ರಾವತ್ ದೇಶ ಮೇ 3ರಂದು ವಿಭಿನ್ನ ಚಟುವಟಿಕೆಯೊಂದಕ್ಕೆ ಸಾಕ್ಷಿಯಾಗಲಿದೆ ಎಂದು ತಿಳಿಸಿದ್ದರು.
ಲಕ್ಷಾಂತರ ವೈದ್ಯರು, ಅರೆವೈದ್ಯರು, ನೈರ್ಮಲ್ಯ ಸಿಬ್ಬಂದಿ ಸೇರಿದಂತೆ ಎಲ್ಲಾ ಕೊರೊನಾ ವಿರುದ್ಧದ ಹೋರಾಟಗಾರರಿಗೂ ಕೃತಜ್ಞತೆ ಸಲ್ಲಿಸಲು ಸಶಸ್ತ್ರ ಪಡೆಗಳು ದೇಶಾದ್ಯಂತ ಹಲವಾರು ಆಸ್ಪತ್ರೆಗಳಲ್ಲಿ ವೈಮಾನಿಕ ಫ್ಲೈ-ಪಾಸ್ಟ್ ನಡೆಸಿ ಹೂಮಳೆಗರೆಯಲು ವಾಯುಸೇನೆ ವ್ಯವಸ್ಥೆಗಳನ್ನು ಮಾಡಿವೆ.
ದೆಹಲಿಯ ಪೊಲೀಸ್ ಸ್ಮಾರಕ ಮತ್ತು ದೇಶದ ಹಲವಾರು ನಗರಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಮಾಲಾರ್ಪಣೆ ಮಾಡುವ ಮೂಲಕ ಕೃತಜ್ಞತಾ ಚಟುವಟಿಕೆಗಳು ಪ್ರಾರಂಭವಾಗಲಿದ್ದು, ರಾಷ್ಟ್ರವ್ಯಾಪಿ ಲಾಕ್ಡೌನ್ ಯಶಸ್ವಿಗೊಳಿಸಲು ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಯನ್ನು ಗೌರವಿಸಲು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ನಂತರ ಭಾರತೀಯ ವಾಯುಸೇನೆಯ ಯುದ್ಧವಿಮಾನ ಮತ್ತು ಸಾರಿಗೆ ವಿಮಾನಗಳು ಫ್ಲೈ-ಪಾಸ್ಟ್ ನಡೆಸಲಿದ್ದು, ಬೆಳಿಗ್ಗೆ 10 ರಿಂದ 11 ರವರೆಗೆ ದೇಶಾದ್ಯಂತ ಗಣನೀಯ ಸಂಖ್ಯೆಯ ನಗರಗಳು ಮತ್ತು ಪಟ್ಟಣಗಳಲ್ಲಿ ಕೊರೊನಾ ವಾರಿಯರ್ಗಳ ಮೇಲೆಹೂಮಳೆ ಸುರಿಯಲಿದೆ.
ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್‌ಗಳು ಮುಂಬೈ, ಗೋವಾ, ಕೊಚ್ಚಿ ಮತ್ತು ವಿಶಾಖಪಟ್ಟಣಂನಲ್ಲಿ ಬೆಳಿಗ್ಗೆ 10 ರಿಂದ 10: 30 ರ ನಡುವೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹೂಮಳೆ ಸುರಿಯಲಿದೆ. ಇನ್ನೊಂದೆಡೆ ಕೇರಳದ ಕೊಚ್ಚಿ ಹಾಗೂ ಎರ್ನಾಕುಲಂ ಜಿಲ್ಲಾಸ್ಪತ್ರೆಯಲ್ಲೂ ವೈದ್ಯರಿಗೆ ಗೌರವ ಸಲ್ಲಿಕೆಯಾಗಲಿದೆ.
ಇನ್ನೊಂದೆಡೆ ಭಾರತೀಯ ಕರಾವಳಿ ಕಾವಲು ಹಡಗುಗಳು ಪೋರಬಂದರ್, ಓಖಾ, ರತ್ನಾಗಿರಿ, ದಹನು, ಮುರುದ್, ಗೋವಾ, ನವ ಮಂಗಳೂರು, ಕವರತಿ, ಕಾರೈಕಲ್, ಚೆನ್ನೈ, ಕೃಷ್ಣಪಟ್ಟಣಂ, ನಿಜಾಮಪಟ್ಟಣಂ, ಪುದುಚೇರಿ, ಕಾಕಿನಾಡ, ಪರದಿಪ್, ಸಾಗರ್ ದ್ವೀಪ, ಪೋರ್ಟ್ ಬ್ಲೇರ್ ಮಾಯಾಬಂದರ್, ಹಟ್ ಬೇ ಮತ್ತು ಕ್ಯಾಂಪ್ಬೆಲ್ ಕೊಲ್ಲಿ ಬಂದರುಗಳಿಗೆ ಬಂದು ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸಲಿದೆ.
ಹೈದರಾಬಾದ್ ಗಾಂಧಿ ಆಸ್ಪತ್ರೆಯ ಸಿಬ್ಬಂದಿ ಮೇಲೂ ಹೂಮಳೆ:
ಹೈದರಾಬಾದ್ನಲ್ಲಿ ಕೊರೊನಾ ಸೋಂಕಿತರನ್ನು ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿಡಲಾಗಿದೆ. ಇಲ್ಲಿನ ವೈದ್ಯಕೀಯ ಸಿಬ್ಬಂದಿ ರೋಗಿಗಳ ನಿರಂತರ ಸೇವೆಯಲ್ಲಿದ್ದಾರೆ. ಹೀಗಾಗಿ ನಾಳೆ ಬೆಳಿಗ್ಗೆ 9.00 ಗಂಟೆಗೆ ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹೂಮಳೆ ಸುರಿಯಲಿದೆ.
ಈ ಹಿನ್ನೆಲೆಯಲ್ಲಿ ಗಾಂಧಿ ಆಸ್ಪತ್ರೆಯ ಅಧೀಕ್ಷಕ ಡಾ.ರಾಜರಾವ್ ಅವರು ಎಲ್ಲಾ ವೈದ್ಯರು, ದಾದಿಯರು, ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ಪೂರ್ಣ ಸಮವಸ್ತ್ರದಲ್ಲಿ ಹಾಜರಾಗುವಂತೆ ನಿರ್ದೇಶಿಸಿದ್ದಾರೆ.