ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಹೆಚ್ಚೆಚ್ಚು ಜನರಿಗೆ ಅಂಟುತ್ತಿದ್ದರೂ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆಯಲ್ಲಿ ಕೂಡ ಗಣನೀಯ ಏರಿಕೆ ಕಂಡುಬರುತ್ತಿದೆ. ಇತ್ತ ಮೃತರ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಆದರೆ ಅಮೆರಿಕ, ಬ್ರೆಜಿಲ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ತೀರಾ ಕಡಿಮೆಯಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 57,982 ಸೋಂಕಿತರು ಪತ್ತೆಯಾಗಿದ್ದು, 941 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 26,47,664 ಹಾಗೂ ಮೃತರ ಸಂಖ್ಯೆ 50,921ಕ್ಕೆ ಏರಿಕೆಯಾಗಿದೆ.
ಅಮೆರಿಕದಲ್ಲಿ ಕೇವಲ 23 ದಿನಗಳಲ್ಲಿ, ಬ್ರೆಜಿಲ್ನಲ್ಲಿ 95 ದಿನಗಳಲ್ಲಿ ಹಾಗೂ ಮೆಕ್ಸಿಕೋನಲ್ಲಿ 141 ದಿನಗಳಲ್ಲಿ ಸಾವಿನ ಸಂಖ್ಯೆ 50 ಸಾವಿರ ಗಡಿ ದಾಟಿದೆ. ಆದರೆ ಭಾರತ ಈ ಗಡಿ ತಲುಪಲು 156 ದಿನಗಳನ್ನು ತೆಗೆದುಕೊಂಡಿದೆ.
ಒಟ್ಟು ಸೋಂಕಿತರ ಪೈಕಿ 19,19,843 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 6,76,900 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಆಗಸ್ಟ್ 16ರವರೆಗೆ 3 ಕೋಟಿಗೂ ಅಧಿಕ ಜನರಿಗೆ (3,00,41,400) ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,31,697 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.