ಹೈದರಾಬಾದ್ (ತೆಲಂಗಾಣ): ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರಿಗೆ ಭಾರತ ರತ್ನ ನೀಡಬೇಕೆಂದು ತೆಲಂಗಾಣದಲ್ಲಿ ಒತ್ತಾಯ ಕೇಳಿ ಬಂದಿದೆ. ಇಂದು ಅಲ್ಲಿನ ವಿಧಾನಸಭೆ ಕಲಾಪದಲ್ಲಿ ರಾವ್ ಅವರಿಗೆ ಭಾರತ ರತ್ನ ನೀಡಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿ ಮಸೂದೆ ಅಂಗೀಕರಿಸಲಾಗಿದೆ.
ಅಧಿವೇಶನದಲ್ಲಿ ಮಸೂದೆ ಮಂಡಿಸಿ ಮಾತನಾಡಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಸಂಸತ್‌ನಲ್ಲಿ ತೆಲಂಗಾಣದ ಪುತ್ರ ವಿಪಿಎನ್ ರಾವ್ ಅವರ ಭಾವಚಿತ್ರ ಹಾಗೂ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಇಂದು ಅಂಗೀಕಾರವಾಗಿರುವ ಮಸೂದೆಯಲ್ಲಿ ಸೆಂಟ್ರಲ್ ಯೂನಿವರ್ಸಿಟಿ ಆಫ್ ಹೈದರಾಬಾದ್‌ಅನ್ನು ಪಿ.ವಿ.ನರಸಿಂಹರಾವ್ ಸೆಂಟ್ರಲ್ ಯೂನಿವರ್ಸಿಟಿ ಎಂದು ಮರುನಾಮಕರಣ ಮಾಡಬೇಕೆಂದು ಪ್ರಸ್ತಾಪವಿಟ್ಟಿದ್ದಾರೆ. ದಕ್ಷಿಣ ಭಾರತದಿಂದ ಆಯ್ಕೆಯಾಗಿದ್ದ ಮೊದಲ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ನರಸಿಂಹ ರಾವ್ ಭಾಜನರಾಗಿದ್ದರು.
ದೇಶದ ಆರ್ಥಿಕ ನೀತಿಗೆ ಹೊಸ ಆಯಾಮವನ್ನು ನೀಡಿದ್ದ ರಾವ್, ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡಬೇಕು. ಈ ಬಗ್ಗೆ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಎಂದು ಕೆಸಿಆರ್ ಒತ್ತಾಯಿಸಿದ್ದಾರೆ.
ತೆಲಂಗಾಣ ಸರ್ಕಾರ ಪಿ.ವಿ.ನರಸಿಂಹ ರಾವ್ ಅವರ ನೂರನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದೆ. ಆದ್ರೆ ಈವರೆಗೆ ಅವರಿಗೆ ಭಾರತ ರತ್ನ ನೀಡದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ಕೂಡ ಸರ್ಕಾರದ ಮಸೂದೆಗೆ ಬೆಂಬಲ ನೀಡಿದೆ. ದೇಶದ ಅತ್ಯುನ್ನತ ಗೌರವಕ್ಕೆ ರಾವ್ ಅವರು ಅರ್ಹರಾಗಿದ್ದಾರೆ ಎಂದು ಕೈ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ ಹೇಳಿದ್ದಾರೆ.