ನಾಶಿಕ್ (ಮಹಾರಾಷ್ಟ್ರ): ಮನೆ ಬಾಡಿಗೆ ನೀಡಲಿಲ್ಲವೆಂದು ಯುವತಿಯೋರ್ವಳಿಗೆ ಮನೆ ಮಾಲೀಕ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿರುವ ಘಟನೆ ಮಹಾರಾಷ್ಟ್ರದ ನಾಶಿಕ್ನಲ್ಲಿ ನಡೆದಿದ್ದು, ಬಾಡಿಗೆ ಹಣ ಪಾವತಿ ಮಾಡದ ಕಾರಣಕ್ಕಾಗಿ ಜಗಳ ತಾರಕ್ಕೇರಿದಾಗ ದುರಂತ ನಡೆದಿದೆ.
18 ವರ್ಷದ ಯುವತಿ ಆಯೆಷಾ ಶೇಖ್ ಸಾವನ್ನಪ್ಪುವುದಕ್ಕೂ ಮುಂಚಿತವಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದು, ಹೀಗಾಗಿ ಮನೆ ಮಾಲೀಕ ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಕಳೆದ ಕೆಲ ತಿಂಗಳಿಂದ ಬಾಡಿಗೆ ಹಣ ನೀಡದ ಬಾಡಿಗೆದಾರರ ಬಳಿ ಮನೆ ಮಾಲೀಕ ಹಾಗೂ ಆತನ ಸಂಬಂಧಿಕರು ಹಣ ಸಂಗ್ರಹ ಮಾಡಲು ಹೋಗಿದ್ದಾರೆ. ಈ ವೇಳೆ ಬಾಡಿಗೆದಾರ ಮಹಿಳೆ ಮತ್ತು ಮಾಲೀಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ವ್ಯಕ್ತಿ ಆಕೆಗೆ ಬೆಂಕಿ ಹಚ್ಚಿದ್ದಾನೆ.
ಮೃತ ಮಹಿಳೆ ಆಯೆಷಾ ಶೇಖ್(18) ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದು, ಪತಿ ಅಸಿಮ್ ಹಾಗೂ ಮಗನೊಂದಿಗೆ ಭರತನಗರ ಪ್ರದೇಶದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಲಾಕ್ಡೌನ್ ಇರುವ ಕಾರಣ ಕೆಲಸವಿಲ್ಲದೇ ಅವರು ಬಾಡಿಗೆ ಪಾವತಿ ಮಾಡಿರಲಿಲ್ಲ. ಇದೇ ವಿಷಯವಾಗಿ ಮನೆ ಮಾಲೀಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಮಂಗಳವಾರ ಕೂಡ ಬಾಡಿಗೆ ಹಣ ಸಂಗ್ರಹಿಸಲು ಹೋದಾಗ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದಿದ್ದಾಳೆ.
ಗಂಭೀರವಾಗಿ ಗಾಯಗೊಂಡಿದ್ದ ಆಕೆ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಅದಕ್ಕೂ ಮುಂಚಿತವಾಗಿ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಕೊಲೆ ಪ್ರಕರಣ ದಾಖಲಾಗಿದೆ.