ಹೈದರಾಬಾದ್ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಟಿಎಸ್‌ಆರ್‌ಟಿಸಿ (ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ) ದ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 15 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ರಾಜ್ಯವ್ಯಾಪಿ ಬಂದ್ ಘೋಷಿಸಲಾಗಿದೆ.
ಸರ್ಕಾರಿ ಸಾರಿಗೆ ಅಲಭ್ಯತೆಯಿಂದಾಗಿ ಇಂದು ಸಂಪೂರ್ಣ ತೆಲಂಗಾಣ ಸ್ತಬ್ಧವಾಗಲಿದೆ. ಸಾರಿಗೆ ನೌಕರರ ಇಂದಿನ ಬಂದ್ ಕರೆಗೆ ಎಲ್ಲಾ ಪ್ರತಿಪಕ್ಷಗಳು, ಜನಸಂಘಟನೆ, ವ್ಯಾಪಾರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಓಲಾ, ಉಬರ್ ಸಿಬ್ಬಂದಿ ಕೂಡಾ ಬೆಂಬಲ ಸೂಚಿಸಿದ್ದಾರೆ.
ತೆಲಂಗಾಣ ಹೈಕೋರ್ಟ್ ಈಗಾಗಲೇ ಟಿಎಸ್‌ಆರ್‌ಟಿಸಿ ಆಡಳಿತ ಮಂಡಳಿಗೆ ನೌಕರರ ಜೊತೆಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವಂತೆ ಸಲಹೆ ನೀಡಿತ್ತು. ಮುಖ್ಯಮಂತ್ರಿ ಕೆಸಿಆರ್, ದಸರಾ ಸಂಭ್ರಮದ ನಡುವೆ ನಡೆದ ನೌಕರರ ಮುಷ್ಕರದಿಂದ ತೀವ್ರ ಆಕ್ರೋಶಗೊಂಡು, 48000 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಅಲ್ಲದೆ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದರು. ಮುಖ್ಯಮಂತ್ರಿಯವರ ಈ ಖಡಕ್ ನಿರ್ಧಾರದಿಂದ ರಾಜ್ಯದಲ್ಲಿ ಇಬ್ಬರು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರತಿಭಟಿಸಿದ ಸಾರಿಗೆ ನೌಕರರಿಗೆ ಶಾಕ್, 48 ಸಾವಿರ ಉದ್ಯೋಗಿಗಳ ವಜಾಗೆ ಸಿಎಂ ಆದೇಶ
ಇಂದು ರಾಜ್ಯವ್ಯಾಪಿ ಮುಷ್ಕರದಿಂದ ಯಾವುದೇ ಸರ್ಕಾರಿ ಬಸ್ ಸೌಲಭ್ಯಗಳು ಇರುವುದಿಲ್ಲ. ಹೀಗಾಗಿ ಜನಸಾಮಾನ್ಯರು ತೀವ್ರ ತೊಂದರೆಗೊಳಗಾಗಲಿದ್ದಾರೆ.
ಕ್ಯಾಬ್ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ :
ಬಂದ್ ವೇಳೆ ಯಾವುದೇ ಬಸ್ ಗಳು ಓಡಾಡದ ಕಾರಣ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಓಲಾ ಮತ್ತು ಉಬರ್ ಕ್ಯಾಬ್ ಚಾಲಕರು ಸಹ ಕ್ಯಾಬ್ ಅಗ್ರಿಗೇಟರ್ ಮಾರುಕಟ್ಟೆಯನ್ನು ಕ್ರಮಬದ್ಧಗೊಳಿಸುವಂತೆ ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟಾವಧಿಗೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.