ಹೈದರಾಬಾದ್ (ತೆಲಂಗಾಣ): ತೆಲಂಗಾಣ ರಾಷ್ಟ್ರೀಯ ಸಮಿತಿಯ(ಟಿಆರ್ಎಸ್) ಶಾಸಕನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಹೀಗಾಗಿ ಅವರ ಸಂಪರ್ಕದಲ್ಲಿದ್ದ ಸಚಿವರು ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಆಡಳಿತ ಪಕ್ಷ ಟಿಆರ್ಎಸ್ನ ಯಡಿಗಿರಿ ರೆಡ್ಡಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ರಾಜ್ಯ ಹಣಕಾಸು ಸಚಿವ ಟಿ. ಹರೀಶ್ ರಾವ್ ಕ್ವಾರಂಟೈನ್ ಆಗಿದ್ದಾರೆ. ಶಾಸಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಶಾಸಕನ ಕುಟುಂಬಸ್ಥರು, ಸಿಬ್ಬಂದಿ ಸಂಪೂರ್ಣವಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದು, ಶಾಸಕರು ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 2ರಂದು ತೆಲಂಗಾಣ ನಿರ್ಮಾಣ ದಿನದಲ್ಲೂ ಇವರು ಭಾಗಿಯಾಗಿದ್ದು, ಜೂನ್ 5ರಂದು ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಾಸಕರು ಹೋಗಿದ್ದ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗಿರುವ ಜನರ ಮಾಹಿತಿ ಕಲೆ ಹಾಕಲು ಆರೋಗ್ಯ ಇಲಾಖೆ ಮುಂದಾಗಿದ್ದು, ಸಮಾರಂಭದಲ್ಲಿ ಸೆರೆಹಿಡಿದಿರುವ ವಿಡಿಯೋ ಹಾಗೂ ಫೋಟೋಗಳ ಮುಖಾಂತರ ಅವರ ಗುರುತಿಸುವ ಕೆಲಸ ನಡೆಯುತ್ತಿದೆ.