ಹೈದ್ರಾಬಾದ್ (ತೆಲಂಗಾಣ): ಹುಸೇನ್ ಸಾಗರದ ದಂಡೆಯಲ್ಲಿರುವ ನೆಕ್ಲೆಸ್ ರಸ್ತೆಯಲ್ಲಿರುವ ಪಿ.ವಿ.ಜ್ಞಾನ ಭೂಮಿಯಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ 100ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ನರಸಿಂಹ ರಾವ್ ಅವರದು "360 ಡಿಗ್ರಿ ವ್ಯಕ್ತಿತ್ವ" ಎಂದು ಬಣ್ಣಿಸಿದರು. ಅವರ ಕೊಡುಗೆಗಳು ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿದೆ. ಅವರು ಹಣ, ಜಾತಿ, ಅಧಿಕಾರ ಹಾಗೂ ಯಾರ ಬೆಂಬಲವಿಲ್ಲದೆ ಮುಖ್ಯಮಂತ್ರಿಯಾಗಿದ್ದು, ನಂತರ ಪ್ರಧಾನಿಯಾದರು.
ಮನಮೋಹನ್ ಸಿಂಗ್ ಅವರನ್ನ ಹಣಕಾಸು ಮಂತ್ರಿಯನ್ನಾಗಿ ಮಾಡುವ ಮೂಲಕ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದರು. ಅವರ ಸುಧಾರಣೆಗಳು ಇಂದು ಫಲ ನೀಡುತ್ತಿವೆ. ನಾವು ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವುದಕ್ಕೆ ಪಿ.ವಿ.ನರಸಿಂಹ ರಾವ್ ಅವರಿಗೆ ಧನ್ಯವಾದ ಎಂದರು.
ರಾವ್ ಅವರ ವ್ಯಕ್ತಿತ್ವವು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೊಂದಿಗೆ ಸಮನಾಗಿರುತ್ತದೆ. ರಾವ್ ಆರ್ಥಿಕ ಸುಧಾರಣೆಗಳನ್ನ ಪರಿಚಯಿಸುವ ಮೂಲಕ ಆಧುನಿಕ ಭಾರತದ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದರು ಎಂದರು.
ಇನ್ನು, ಅನೇಕ ದೇಶಗಳಲ್ಲಿ ಪಿ.ವಿ.ನರಸಿಂಹ ರಾವ್ ಅವರ ಅಭಿಮಾನಿಗಳಿದ್ದಾರೆ. ಹೀಗಾಗಿ ವರ್ಷಪೂರ್ತಿ ನಡೆಯುವ ಅವರ ಶತಮಾನೋತ್ಸವಕ್ಕಾಗಿ ರಾಜ್ಯ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿ, 51 ದೇಶಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.