ವರಂಗಲ್: ತೆಲಂಗಾಣ ಮಾಧ್ಯಮಿಕ ಶಿಕ್ಷಣ ಮಂಡಳಿ (ಟಿಬಿಐಇ) ಪೇಚಿಗೆ ಸಿಲುಕುವಂತಹ ಘಟನೆ ಇಲ್ಲಿನ ವರಂಗಲ್ ಪೊಲೀಸ್ ಠಾಣೆಯಲ್ಲಿ ಜರುಗಿದೆ.
ಟಿಬಿಐಇ ಪೂರಕ ಪರೀಕ್ಷೆಗೆ ಎಂದು ಸಿದ್ಧಪಡಿಸಿ ಭದ್ರತೆಗಾಗಿ ವರಂಗಲ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಎರಡು ಬಾಕ್ಸ್ ಕಾಣೆಯಾಗಿವೆ. ಇದರಿಂದ ರಕ್ಷಣಾ ಜವಾಬ್ದಾರಿ ಹೊತ್ತ ಪೊಲೀಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಜುಗರಕ್ಕೆ ಒಳಗಾಗಿದ್ದಾರೆ.
ಶುಕ್ರವಾರದಿಂದ ಆರಂಭವಾಗಲಿರುವ ಪರೀಕ್ಷೆಗೆ ಆರಂಭಿಕ ತೊಡಕು ಎದುರಾಗಿದ್ದು, ಒಟ್ಟು 13 ಪ್ರಶ್ನೆ ಪತ್ರಿಕೆಗಳ ಬಾಕ್ಸ್ಗಳಲ್ಲಿ 2 ನಾಪತ್ತೆಯಾಗಿದ್ದು ಮಿಲ್ಸ್ ಕಾಲೊನಿ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಠಾಣೆಗೆ ತೆರಳಿ ಪ್ರಶ್ನಿ ಪತ್ರಿಕೆ ಪಡೆಯಲು ಮುಂದಾದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಮಂಡಳಿ (ಎಸ್ಎಸ್ಸಿ) ಪ್ರಶ್ನೆ ಪತ್ರಿಕೆಗಳನ್ನು ಮಾರ್ಚ್ ತಿಂಗಳಿಂದ ಎರಡು ಬೇರೆ ಬೇರೆ ಬಾಕ್ಸ್ಗಳಲ್ಲಿ ಇರಿಸಿದ್ದೇವೆ. ಶಾಲಾ ಶಿಕ್ಷಣ ಮಂಡಳಿ ತಪ್ಪಾಗಿ ಮಾಧ್ಯಮಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದ ಪ್ರಶ್ನೆ ಪತ್ರಿಕೆಗಳ ಪೆಟ್ಟಿಗೆ ತೆಗೆದುಕೊಂಡು ಹೋಗಿರಬಹುದೆಂದು ಶಂಕೆ ವ್ಯಕ್ತಪಡಿಸಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಕಾಣೆಯಾದ ಪ್ರಶ್ನೆ ಪತ್ರಿಕೆ ಪೆಟ್ಟಿಗೆಗಳು ಭೌತಶಾಸ್ತ್ರ, ಅರ್ಥಶಾಸ್ತ್ರ, ಜೀವಶಾಸ್ತ್ರ, ಇತಿಹಾಸ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದ್ದವು. ಈ ಬಗ್ಗೆ ಠಾಣೆಯಲ್ಲಿನ ಸಿಸಿ ಟಿವಿ ಕ್ಯಾಮೆರಾದ ವಿಡಿಯೋ ಪರಿಶೀಲನಗೆ ಒಳಪಡಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.