ಫಿರೋಜಾಬಾದ್ (ಉತ್ತರ ಪ್ರದೇಶ): ಹದಿನಾರು ವರ್ಷದ ಬಾಲಕಿಯನ್ನು ಮೂವರು ಯುವಕರು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮೂವರು ಯುವಕರು ಮಧ್ಯರಾತ್ರಿ ವೇಳೆ ಮನೆ ಬಾಗಿಲು ಬಡಿದಿದ್ದಾರೆ. ಬಾಲಕಿ ಬಾಗಿಲು ತೆರೆದಾಗ, ಅವಳ ತಲೆಗೆ ಗುಂಡು ಹಾರಿಸಿದ್ದಾರೆ ಎಂದು ಬಾಲಕಿಯ ತಂದೆ ಅಜಯ್ ತಿಳಿಸಿದ್ದಾರೆ. ಈ ಘಟನೆ ನಡೆದ ಸಮಯದಲ್ಲಿ ತಂದೆ ಮತ್ತು ಬಾಲಕಿಯ ಸಹೋದರ ಮನೆಯ ಟೆರೇಸ್‌ನಲ್ಲಿದ್ದರು ಎಂಬ ಮಾಹಿತಿ ಇದೆ.
ಮಗಳು 12ನೇ ತರಗತಿಯಲ್ಲಿ ಓದುತ್ತಿದ್ದು, ಶುಕ್ರವಾರ ಶಾಲೆಯಿಂದ ಹಿಂದಿರುಗುವಾಗ ಗೌರವ್ ಚಕ್, ಸೋಪ್ಲಿ ಯಾದವ್ ಮತ್ತು ಮನೀಶ್ ಯಾದವ್ ಎಂಬ ಮೂವರು ಯುವಕರು ಕಿರುಕುಳ ನೀಡಿದರು ಎಂದು ಬಾಲಕಿ ತಿಳಿಸಿರುವುದಾಗಿ ತಂದೆ ಅಜಯ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗೆ ಬಲೆ ಬೀಸಿದ್ದಾರೆ.