ಹೈದರಾಬಾದ್: ವಿಧಾನಸಭೆ ಮತ್ತು ಸಚಿವಾಲಯದ ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ವಿರುದ್ಧ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರು 'ಸಚಿವಾಲಯ ಚಲೋ' ಪ್ರತಿಭಟನೆ ನಡೆಸಿದ್ದಾರೆ.
ಆಕ್ರೋಶಿತರು ಹೈದರಾಬಾದ್ನಿಂದ ವಿಧಾನಸಭೆ ಮತ್ತು ಸಚಿವಾಲಯ ಕಟ್ಟಡಗಳವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಧೃಡವಾಗಿ ವಿರೋಧಿಸುತ್ತೇವೆ. ಕೂಡಲೇ ಇದನ್ನು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಟಿಡಿಪಿ ಹಿರಿಯ ಮುಖಂಡ ರಾವುಲ ಚಂದ್ರಶೇಖರ್ ರೆಡ್ಡಿ ಒತ್ತಾಯಿಸಿದ್ದಾರೆ.
ಜೂನ್ 19ರಂದು ಕೆ.ಚಂದ್ರಶೇಖರ್ ರಾವ್ ಅವರು ಈ ಕಟ್ಟಡಗಳನ್ನು ಕೆಡವಿ ಬಿಸನ್ ಪೊಲೊ ಮೈದಾನದಲ್ಲಿ ನಿರ್ಮಿಸಲು ಮುಂದಾಗಿದ್ದರು. ಆದರೆ, ಅನುಮತಿ ದೊರೆಯದ ಕಾರಣ ಹಳೇ ಕಟ್ಟಡದಲ್ಲಿಯೇ ನಿರ್ಮಿಸಲು ಘೋಷಿಸಿದ್ದರು.
ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರನ್ನು ಭೇಟಿಯಾಗಿರುವ ಪಕ್ಷದ ನಾಯಕರು ಈ ಕುರಿತು ಚರ್ಚಿಸಿದ್ದಾರೆ ಎಂದು ಹೇಳಿದರು. ದರಣಿ ಚೌಕ್ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಚಂದ್ರಶೇಖರ್ ರಾವ್ ಅವರು ನೂತನ ಕಟ್ಟಡ ನಿರ್ಮಾಣಕ್ಕೆ ಸುಮಾರು ₹ 400 ಕೋಟಿ ಅಂದಾಜಿಸಿದ್ದಾರೆ. ಅಷ್ಟೇ ಅಲ್ಲದೆ, ವಿಧಾನಸಭೆಯ ಕಾಂಪೌಂಡ್ ನಿರ್ಮಾಣಕ್ಕೆ ಅಂದಾಜು ₹ 100 ಕೋಟಿ ಎಂದು ತಿಳಿಸಿದ್ದಾರೆ. ಜೂನ್ 27ರಂದು ಅದಕ್ಕೆ ಅಡಿಪಾಯವನ್ನೂ ಹಾಕಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ತೆಲಂಗಾಣ ಜನಸಮಿತಿ, ಅಖಿಲ ಪಕ್ಷ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿವೆ.