ಚೆನ್ನೈ: ಕೋವಿಡ್ ಹರಡುವ ಭೀತಿಯಿಂದ ನಿನ್ನೆಯಷ್ಟೇ ತೆಲಂಗಾಣದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ನೇರವಾಗಿ 11ನೇ ತರಗತಿಯ ಪ್ರವೇಶಕ್ಕೆ ಅವಕಾಶ ನೀಡಿ ಅಲ್ಲಿನ ಸರ್ಕಾರ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ತಮಿಳುನಾಡು, ಪುದುಚೇರಿ ಸರ್ಕಾರಗಳೂ ಕೂಡ ಇಂತಹದ್ದೇ ನಿರ್ಧಾರ ಕೈಗೊಂಡಿವೆ.
ತಮಿಳುನಾಡಿನಲ್ಲಿ 10 ಮತ್ತು 11ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರ ಆದೇಶ ಹೊರಡಿಸಿದೆ.
11ನೇ ತರಗತಿಯ ಕೆಲವು ಪರೀಕ್ಷೆಗಳು ಬಾಕಿ ಇದ್ದವು. ಅವುಗಳನ್ನು ಈಗ ರದ್ದು ಮಾಡಿದ್ದಾರೆ. ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸದ್ಯಕ್ಕೆ ವೈರಸ್ ಹರಡುವಿಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ ಎಂದು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.
ಲಾಕ್‌ಡೌನ್‌ನಿಂದಾಗಿ ನೆರೆಯ ರಾಜ್ಯದಲ್ಲಿ 10ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಜೂನ್ 15ಕ್ಕೆ ಮುಂದೂಡಲಾಗಿತ್ತು. ಕೋವಿಡ್ ಹೆಚ್ಚಳದಿಂದಾಗಿ ಪೋಷಕರ ಆತಂಕವನ್ನು ದೂರ ಮಾಡುವ ಸಲುವಾಗಿ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ.