ಚೆನ್ನೈ (ತಮಿಳುನಾಡು): ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ತಮ್ಮ ಕಚೇರಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಐಸೊಲೇಷನ್ನಲ್ಲಿದ್ದ ಅವರು ಅಳ್ವಾರ್ ಪೇಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರಿಗೆ ಸೋಂಕು ಪರೀಕ್ಷೆ ಮಾಡಲಾಗಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ.

ಸದ್ಯಕ್ಕೆ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗವರ್ನರ್ ಅವರು ಲಕ್ಷಣ ರಹಿತ ಸೋಂಕನ್ನು ಹೊಂದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕಾವೇರಿ ಆಸ್ಪತ್ರೆಯ ಮೂಲಗಳು ಸ್ಪಷ್ಟನೆ ನೀಡಿವೆ.
ತಮಿಳುನಾಡು ರಾಜಭವನದ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಂಡು ಬಂದಾಗಿನಿಂದ ರಾಜ್ಯಪಾಲರನ್ನು ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಜುಲೈ 29ರಿಂದ ಅವರು ಹೋಮ್ ಕ್ವಾರಂಟೈನ್ಲ್ಲಿದ್ದರು. ಈ ವೇಳೆ ರಾಜ್ಯಪಾಲರು ಆರೋಗ್ಯವಾಗಿದ್ದಾರೆ ಎಂದು ರಾಜಭವನದ ಮೂಲಗಳು ಸ್ಪಷ್ಟನೆ ನೀಡಿದ್ದವು.
ಈಗ ರಾಜ್ಯಪಾಲರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರ ಸಂಪರ್ಕಕ್ಕೆ ಬಂದವರಿಗೆ ಸೋಂಕು ಪರೀಕ್ಷೆಗೆ ಸೂಚಿಸಲಾಗಿದೆ.
ದೇಶದಲ್ಲಿ ತಮಿಳುನಾಡು ಅತಿ ಹೆಚ್ಚು ಕೊರೊನಾಪೀಡಿತ ರಾಜ್ಯಗಳಲ್ಲೊಂದಾಗಿದ್ದು, ಈಗ ಸುಮಾರು 56,738 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 4,034 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು 1,90,966 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.