ನವದೆಹಲಿ: ರೈತ ಪ್ರತಿನಿಧಿಗಳು ಬುಧವಾರ ಸಭೆಯಿಂದ ಹೊರನಡೆದಿದ್ದರಿಂದ ಕೇಂದ್ರ ಮತ್ತು ಪ್ರತಿಭಟಿಸುತ್ತಿರುವ ಪಂಜಾಬ್ ಕೃಷಿ ಸಂಘಗಳ ನಡುವಿನ ಮಾತುಕತೆ ವಿಫಲವಾಗಿದೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಸದಸ್ಯರಿಗೆ ಆಹ್ವಾನವನ್ನು ನೀಡಿದ್ದರಿಂದ 29 ಒಕ್ಕೂಟಗಳ ರೈತರು ಕೇಂದ್ರ ಕೃಷಿ ಕಾರ್ಯದರ್ಶಿ ಸಂಜಯ್ ಅಗರ್‌ವಾಲ್ ಅವರನ್ನು ಭೇಟಿ ಮಾಡಲು ಒಪ್ಪಿಕೊಂಡು ದೆಹಲಿಗೆ ಬಂದಿದ್ದರು ಎಂದು ವರದಿಗಳು ತಿಳಿಸಿವೆ.
ಕೇಂದ್ರ ಸಚಿವರು ನಮ್ಮನ್ನೆಲ್ಲ ಇಲ್ಲಿ ಸಭೆ ಕರೆದು ಅತ್ತ ಪಂಜಾಬ್‌ನಲ್ಲಿ ಸಭೆ, ಪ್ರಚಾರ ಗಳನ್ನು ನಡೆಸುತ್ತಿದ್ದಾರೆ ಎಂದು ರೈತ ಪ್ರತಿನಿಧಿಗಳು ಹೇಳಿದರು.
ಈಟಿವಿ ಭಾರತದೊಂದಿಗೆ ರೈತ ಮುಖಂಡ ಜಗ್ಜಿತ್ ಸಿಂಗ್ ದಲೇವಾಲ್ ಮಾತನಾಡಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಭೆಯಲ್ಲಿ ಪಾಲ್ಗೊಳ್ಳಲೂ ಬಯಸಿಲ್ಲ. ಇತ್ತ ಕೃಷಿ ಕಾರ್ಯದರ್ಶಿ ನಮ್ಮ ಮಾತನ್ನು ಕೇಳಲು ಸಿದ್ಧರಿಲ್ಲ, ಮಸೂದೆಯ ಬಗ್ಗೆ ನಮಗೆ ಈಗಾಗಲೇ ತಿಳಿದಿದ್ದರೂ ಅವರು ನಮಗೆ ಕಾಯ್ದೆಯ ಪ್ರಯೋಜನಗಳನ್ನೇ ಹೇಳುತ್ತಿದ್ದರು ಎಂದು ದೂರಿದರು.
ನಾವು ಸಭೆಗೆ ಬಂದಿದ್ದು ರೈತರು ಸಂವಾದಕ್ಕೆ ಮುಕ್ತರಾಗಿಲ್ಲ ಎಂಬುದನ್ನು ಅವರಿಗೆ ತಿಳಿಸಲು. ಆದರೆ ಸಚಿವರು ನಮ್ಮನ್ನು ಕರೆಸಿ ತಾವೇ ಬಾರದೆ ನಿರಾಸೆ ಮಾಡಿದ್ದಾರೆ. ನಾವು ಪ್ರಧಾನಿ ಮತ್ತು ಕೃಷಿ ಸಚಿವರನ್ನು ಭೇಟಿ ಮಾಡಲು ಬಯಸಿದ್ದೆವು ಎಂದು ಎಐಕೆಎಸ್‌ಸಿಸಿ ಅಧ್ಯಕ್ಷ ಡಾ. ದರ್ಶನ್ ಪಾಲ್ ಹೇಳಿದರು.
ಇನ್ನೂ ಸಭೆಯಿಂದ ಹೊರ ನಡೆಯುವ ವೇಳೆ ರೈತರು ಸಚಿವಾಲಯದ ಒಳಗೆ ಘೋಷಣೆಗಳನ್ನು ಕೂಗಿದರು. ಮತ್ತು ಸಚಿವಾಲಯದ ಹೊರಗೆ ಬಂದು ಕೃಷಿ ಮಸೂದೆಯ ಪ್ರತಿಗಳನ್ನು ಹರಿದು ಹಾಕಿದರು. ಇದಕ್ಕೂ ಮೊದಲು ರೈತರು ತಮ್ಮ ಬೇಡಿಕೆಗಳ 10 ಅಂಶಗಳುಳ್ಳ ಪ್ರತಿಯನ್ನು ಕೃಷಿ ಕಾರ್ಯದರ್ಶಿ ಅಗ್ರವಾಲ್ ಅವರಿಗೆ ಸಲ್ಲಿಸಿದರು.