ನವದೆಹಲಿ: ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಿವಿಧ ನಿಯಮಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ದಂಡ ವಿಧಿಸಿ ತಬ್ಲಿಘಿ ಜಮಾತ್ ಸದಸ್ಯರನ್ನು ಗಡೀಪಾರು ಮಾಡಲು ಆದೇಶಿಸಿತ್ತು.
ಆದರೆ, ಸುಮಾರು 70 ವಿದೇಶಿ ತಬ್ಲಿಘಿ ಜಮಾತ್ ಸದಸ್ಯರು ಅವರ ವಿರುದ್ಧದ ಇತರ ಏಳು ಎಫ್‌ಐಆರ್‌ಗಳು ಬಾಕಿ ಉಳಿದಿರುವ ಕಾರಣ ತಮ್ಮ ದೇಶಗಳಿಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಅವರ ಪ್ರತಿನಿಧಿಗಳು ಹೇಳಿದ್ದಾರೆ.
ಮಾರ್ಚ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತಬ್ಲೀಘಿ ಸದಸ್ಯರ ವಿರುದ್ಧ ಈ ಏಳು ಎಫ್‌ಐಆರ್‌ಗಳಲ್ಲಿ ವಿಚಾರಣೆ ನಡೆಸಲು ಪೊಲೀಸರು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ನ್ಯಾಯಾಲಯವು ಇಂದು ಈ ವಿಷಯವನ್ನ ಆಲಿಸಲಿದೆ ಎಂದು ತಬ್ಲಿಘಿ ಜಮಾತ್ ಹೇಳಿದೆ.
ಈ ಪ್ರಕರಣದಲ್ಲಿ ದೆಹಲಿ ಪೊಲೀಸರ ಚಾರ್ಜ್‌ಶೀಟ್ ಪಡೆದ ಜಿಬೌಟಿ, ಕೀನ್ಯಾ, ತಾನ್ಜೇನಿಯಾ, ಬ್ರೆಜಿಲ್, ಸುಡಾನ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ವಿವಿಧ ದೇಶಗಳ ವಿದೇಶಿಯರ ಮೇಲೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಏಳು ಎಫ್‌ಐಆರ್‌ಗಳನ್ನು ಸದರ್ ಬಜಾರ್, ಸೀಲಾಂಪುರ್, ಜಹಾಂಗೀರ್‌ಪುರಿ, ವಾಜಿರಾಬಾದ್, ದಯಾಲ್‌ಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿದೆ.
ನ್ಯಾಯಾಲಯದ ಗಡೀಪಾರು ಆದೇಶದ ನಂತರ ಇಲ್ಲಿಯವರೆಗೆ ಕೇವಲ 108 ಜನರು ತಮ್ಮ ದೇಶಗಳಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ -19 ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಕ್ರಿಮಿನಲ್ ಪ್ರೊಸೀಜರ್ ಸೆಕ್ಷನ್ 144ರ ಅಡಿ ಸರ್ಕಾರದ ಮಾರ್ಗಸೂಚಿಗಳನ್ನು ಹಾಗೂ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿದೇಶಿ ಪ್ರಜೆಗಳ ಮೇಲೆ ಈ ಹಿಂದೆ ಪ್ರಕರಣ ದಾಖಲಾಗಿತ್ತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188, 269, 270 ಮತ್ತು 271 ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸಂಬಂಧಿತ ವಿಭಾಗಗಳ ಮೇಲೆಯೂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಂದ್ರವು ಅವರ ವೀಸಾವನ್ನು ರದ್ದುಗೊಳಿಸಿ, ಕಪ್ಪುಪಟ್ಟಿಗೆ ಸೇರಿಸಿದೆ.
ನಿಜಾಮುದ್ದೀನ್‌ನಲ್ಲಿನಲ್ಲಿ ತಬ್ಲಿಘಿ ಜಮಾತ್ನ ಧಾರ್ಮಿಕ ಸಭೆಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 9,000 ಜನರು ಭಾಗವಹಿಸಿದ್ದರು.