ಕ್ಯಾನ್ಬೆರಾ (ಆಸ್ಟ್ರೇಲಿಯಾ): ಕೊರೊನಾ ವೈರಸ್ ಹಾವಳಿ ತೀವ್ರವಾಗುತ್ತಿರುವಾಗ ಈ ವರ್ಷ ಟಿ-20 ಕ್ರಿಕೆಟ್ ವಿಶ್ವಕಪ್ ನಡೆಯುವುದು ವಾಸ್ತವಕ್ಕೆ ದೂರವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧ್ಯಕ್ಷ ಎರ್ಲ್ ಎಡ್ಡಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಬೇಕಿತ್ತು. ಆದರೆ ಕೊರೊನಾ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿಗಳು ಮುಚ್ಚಿವೆ. ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ಪ್ರಯಾಣ ಬೆಳೆಸುವುದು ಕಷ್ಟವಾಗಲಿದ್ದು, ಟೂರ್ನಿಯನ್ನು ಮುಂದೂಡಲು ಚಿಂತನೆ ನಡೆಸಲಾಗಿದೆ.
ಟಿ-20 ವಿಶ್ವಕಪ್ ಟೂರ್ನಿ ರದ್ದಾಗದಿದ್ದರೆ ಅಥವಾ ಮುಂದೂಡಿಕೆಯಾಗದಿದ್ದರೆ, ಕ್ರಿಕೆಟ್ನಲ್ಲಿ ಭಾಗವಹಿಸುವ ಒಟ್ಟು 16 ರಾಷ್ಟ್ರಗಳನ್ನು ಆಸ್ಟ್ರೇಲಿಯಾಗೆ ಕರೆತರುವ ಕೆಲಸ ಮಾಡಬೇಕಾಗುತ್ತದೆ. ಆದರೆ ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳಲ್ಲಿ ಕೊರೊನಾ ಗಂಭೀರವಾಗಿ ಆವರಿಸಿದೆ. ಅದ್ದರಿಂದ ಈ ವರ್ಷ ಕ್ರಿಕೆಟ್ ಟೂರ್ನಿ ಆಯೋಜನೆ ಅವಾಸ್ತವ ಹಾಗೂ ತುಂಬಾ ಕಠಿಣ ಎಂದು ಎರ್ಲ್ ಎಡ್ಡಿಂಗ್ಸ್ ತಿಳಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಐಸಿಸಿ ಮುಂದೆ ಸಾಕಷ್ಟು ಅಭಿಪ್ರಾಯಗಳನ್ನು ಇರಿಸಿದ್ದು, ಸಭೆ ನಡೆಸಿ ಐಸಿಸಿ ಯಾವುದಾದರೊಂದು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಮಂಗಳವಾರ ಕ್ರಿಕೆಟ್ ಆಸ್ಟ್ರೇಲಿಯಾದ ಮಧ್ಯಂತರ ಕಾರ್ಯಕಾರಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಟಿ-20 ವಿಶ್ವಕಪ್ನ ಕಾರ್ಯಕಾರಿ ಮುಖ್ಯಸ್ಥ ನಿಕ್ ಹಾಕ್ಲೆ ಐಸಿಸಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ. ನಮ್ಮ ಬಳಿ ಅತ್ಯದ್ಭುತವಾದ ಸ್ಥಳೀಯ ಆಯೋಜಕರ ಮಂಡಳಿಯಿದೆ. ಐಸಿಸಿ ಟೂರ್ನಿಗೆ ಅನುಮತಿ ಕೊಟ್ಟರೆ ಅತ್ಯಂತ ಸುವ್ಯವಸ್ಥಿತಾಗಿ ಟೂರ್ನಿ ಆಯೋಜಿಸುತ್ತಾರೆ ಎಂದಿದ್ದಾರೆ.
ಕೆಲವೊಂದು ಮೂಲಗಳ ಪ್ರಕಾರ, ಈ ವರ್ಷ ಟಿ-20 ವಿಶ್ವಕಪ್ ನಡೆಯುವುದು ಸಾಧ್ಯವಿಲ್ಲ ಎನ್ನಲಾಗುತ್ತಿದ್ದು, ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ.