ಬರುವ ಏಪ್ರಿಲ್ ತಿಂಗಳಿನಿಂದ ಗ್ರಾಮೀಣ ಪ್ರದೇಶದಲ್ಲಿ ಎರಡನೇ ಹಂತದ 'ಸ್ವಚ್ಛ ಭಾರತ್' ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಸ್ವಚ್ಛತೆ ಕುರಿತ ಈ ಬೃಹತ್ ಯೋಜನೆಯ ನಿಮಿತ್ತ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಅಂದಾಜು 52,000 ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡಲು ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ. ಎರಡನೇ ಹಂತದ ಯೋಜನೆಯ ಮೊದಲ ವರ್ಷದ ವಿನಿಯೋಗಕ್ಕೆಂದು ಸುಮಾರು 10,000 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿದೆ. ಸಂಪೂರ್ಣವಾಗಿ ಬಯಲು ಶೌಚ ಮುಕ್ತ ಭಾರತ ನಿರ್ಮಾಣ ಮಾಡುವುದು ಎರಡನೇ ಹಂತದ ಯೋಜನೆಯ ಉದ್ದೇಶಿತ ಗುರಿ! ವಿವಿಧ ರಾಜ್ಯಗಳ ನೈರ್ಮಲ್ಯ ಸೇವೆಗಳ ಗುಣಮಟ್ಟ ಪರಿಶೀಲನೆ ಮಾಡುವ ಗ್ರಾಮೀಣಾಭಿವೃದ್ಧಿ ಸ್ಥಾಯಿ ಸಮಿತಿ ಇತ್ತೀಚೆಗೆ ಕೆಲವು ಅತೃಪ್ತಿಕರ ಸಂಗತಿಗಳನ್ನು ಹೊರ ಹಾಕಿದೆ.
'ಸ್ವಚ್ಛಭಾರತ್' ಯೋಜನೆಯ ಅಡಿ ಮೀಸಲಿಟ್ಟಿದ್ದ 6,500 ಕೋಟಿ ರೂಪಾಯಿ ಹಣವನ್ನು ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಬಳಸದೇ ಹಾಗೆಯೇ ಉಳಿಸಿವೆ ಎಂದು ಅದು ವಿಶ್ಲೇಷಿಸಿದೆ. ಒಂದು ವೇಳೆ ಆಂಧ್ರಪ್ರದೇಶ, ಪಂಜಾಬ್ ಹಾಗೂ ಅಸ್ಸೋಂ ರಾಜ್ಯಗಳು ಕೂಡ ಹಣ ಬಳಸಿಕೊಳ್ಳದೇ ಹೋಗಿದ್ದರೆ ಹಾಗೆ ಬಾಕಿ ಉಳಿಯುತ್ತಿದ್ದ ಮೊತ್ತ ರೂ .14 ಸಾವಿರ ಕೋಟಿ ದಾಟುತ್ತಿತ್ತು. ಸ್ವಚ್ಛ ಭಾರತ್ ಯೋಜನೆಯ ಮೊದಲ ಹಂತದ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದರೆ ಬದ್ಧತೆ ಮತ್ತು ಜವಾಬ್ದಾರಿ ಇಲ್ಲದ ಅನೇಕ ಏಜೆನ್ಸಿಗಳಿಗೆ ಯೋಜನೆಯ ಹೊಣೆ ವಹಿಸಿದ್ದು ಎಂದು ಸ್ಥಾಯಿ ಸಮಿತಿಯ ಸಂಶೋಧನೆ ಎತ್ತಿ ತೋರಿಸಿದೆ.
ಸರಿಯಾದ ಕ್ರಿಯಾ ಯೋಜನೆ ಜಾರಿಗೊಳಿಸಿದ್ದರೆ, ಖರ್ಚು ಮಾಡಿದ ಹಣಕ್ಕೆ ತಕ್ಕಂತೆ ಸೂಕ್ತ ಫಲಿತಾಂಶ ಪಡೆಯಬಹುದಿತ್ತು. ಕನಿಷ್ಠ ಯೋಜನೆಯ ಎರಡನೇ ಹಂತದಲ್ಲಿಯಾದರೂ, ತಪ್ಪನ್ನು ಸರಿಪಡಿಸಿಕೊಳ್ಳುವ ಮೂಲಕ ಮತ್ತು ವಿನಿಯೋಗ ಮಾಡಿದ ಪ್ರತಿ ರೂಪಾಯಿಯನ್ನೂ ಸರಿಯಾಗಿ ಖರ್ಚು ಮಾಡುವ ಮೂಲಕ ಸ್ವಚ್ಛ ಭಾರತ್ ಯೊಜನೆಯ ಉನ್ನತ ಧ್ಯೇಯವನ್ನು ಸಾಕಾರಗೊಳಿಸಬೇಕಿದೆ. ಸತ್ಯಾಗ್ರಹದ ರೀತಿಯ ಆಂದೋಲನ ಪ್ರಾರಂಭ ಮಾಡುವ ಮೂಲಕ ನಿರ್ಮಲ ವಾತಾವರಣ ಮೂಡಿಸಬೇಕಿದ್ದು ಕೊಳಕು ಹಾಗೂ ಕಸವನ್ನು ಹಳ್ಳಿಗಳಿಂದ ತೊಲಗಿಸಬೇಕಿದೆ.
ಬಯಲು ಮಲ ವಿಸರ್ಜನೆ, ತೆರೆದ ಒಳಚರಂಡಿ ಹಾಗೂ ತೆರೆದ ಕಸದ ತೊಟ್ಟಿಗಳಿಂದ ರಾಷ್ಟ್ರವನ್ನು ರಕ್ಷಿಸಬೇಕು ಎಂಬ ದೃಢ ಬದ್ಧತೆಯೊಂದಿಗೆ ಮೋದಿ ಸರ್ಕಾರ 2014 ರ ಅಕ್ಟೋಬರ್ 2 ರಂದು ಸ್ವಚ್ಛ ಭಾರತ್ ಆಂದೋಲನ ಪ್ರಾರಂಭಿಸಿತು. ' ದೇಶದ ಎಲ್ಲಾ ಮಾನವ ವಾಸಸ್ಥಾನಗಳನ್ನು ಸ್ವಚ್ಛ ಮತ್ತು ಹಸಿರು ವಾತಾವರಣದಿಂದ ಸಮೃದ್ಧಗೊಳಿಸಲು ನಿರ್ಧರಿಸಿ ‘ಸ್ವಚ್ಛ ಭಾರತ್' ಘೋಷಣೆಗಳು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಪ್ರತಿಧ್ವನಿಸಿದವು. ಬಾಪೂಜಿಯವರ 150 ನೇ ಜನ್ಮದಿನದಂದು ( ಅಕ್ಟೋಬರ್ 2, 2019 ) ದೇಶದಲ್ಲಿ ವಾಸ ಮಾಡುವ ಎಲ್ಲರಿಗೂ ಶಾಶ್ವತ ಶೌಚಾಲಯ, ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ, ಗುಣಮಟ್ಟದ ಕುಡಿಯುವ ನೀರು ಹಾಗೂ ಚಂದದ ರಸ್ತೆನಿರ್ಮಾಣ ಮಾಡುವ ಸಂಕಲ್ಪ ಸಾಕಷ್ಟು ಎತ್ತರದ ಮಟ್ಟದ್ದು. ಈ ಉನ್ನತ ಗುರಿಯ ಬೆನ್ನತ್ತಿ ಒಂಬತ್ತು ಕೋಟಿ 20 ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆ ಮೂಲಕ ದೇಶದ 28 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಐದರಿಂದ ಆರು ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತ ಹಳ್ಳಿಗಳನ್ನಾಗಿ ಘೋಷಿಸಿ ಕೇಂದ್ರ ಸರ್ಕಾರ ಹೆಮ್ಮೆಯಿಂದ ಬೀಗುತ್ತಿದೆ.
ದೇಶದ ಜನಸಂಖ್ಯೆಯ ಶೇ 95ರಷ್ಟು ಮಂದಿಗೆ ಶೌಚಾಲಯಗಳು ಲಭ್ಯ ಇವೆ ಎಂಬ ಸರ್ಕಾರದ ಹೇಳಿಕೆಯನ್ನು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ ( ಎನ್ ಎಸ್ ಒ ), ಒಪ್ಪಿಕೊಂಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳ ಪ್ರಮಾಣ ಶೇ 71 ರಷ್ಟು ಇದೆ ಎಂದು ಅದು ದೃಢಪಡಿಸಿದೆ. ಒಡಿಶಾ ಮತ್ತು ಉತ್ತರ ಪ್ರದೇಶದಲ್ಲಿ ಗ್ರಾಮೀಣ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಶೌಚಾಲಯ ಎಂಬುದು ಇನ್ನೂ ಕನಸಿನ ಮಾತು ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೇ ಸ್ಟಾಟಿಸ್ಟಿಕಲ್ ಸೆಂಟರ್ ಹೇಳಿದೆ. ಭಾರತದಲ್ಲಿ, ಪ್ರತಿವರ್ಷ ಲಕ್ಷಾಂತರ ಮಕ್ಕಳ ಪ್ರಾಣಹಾನಿಗೆ ಅನೈರ್ಮಲ್ಯವೇ ಮುಖ್ಯ ಕಾರಣ ಆಗಿದ್ದು ಇತರರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನುಕೂಡ ಇದು ಕುಂಠಿತಗೊಳಿಸುತ್ತದೆ.
ಹಿಂದಿನ ದಿನಗಳಿಗೆ ಹೋಲಿಸಿದರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಮತ್ತು ಸಮುದಾಯ ಶೌಚಾಲಯಗಳ ನಿರ್ಮಾಣ ಪ್ರವೃತ್ತಿ ಹೆಚ್ಚಿದೆ ಎಂಬುದು ಸತ್ಯ. ಆದರೂ, ಈ ಮೂಲ ಸೌಕರ್ಯ ಇನ್ನೂ ಕೋಟ್ಯಂತರ ಭಾರತೀಯರನ್ನು ತಲುಪಿಲ್ಲ ಎಂಬುದು ನಿರಾಕರಿಸಲಾಗದ ಸಂಗತಿ. ಸ್ವಚ್ಛ ಭಾರತ್ ಯೋಜನೆಗೆ ವೈಜ್ಞಾನಿಕ ವಿಧಾನ ಅಳವಡಿಕೆ, ನಿರಂತರ ಪ್ರಯತ್ನ ಹಾಗೂ ಉತ್ಸಾಹ ದೊರೆತರೆ ಮಾತ್ರ ನಿರೀಕ್ಷಿತ ಬದಲಾವಣೆ ಸಾಧಿಸಬಹುದು. ಐದು ವರ್ಷಗಳ ಹಿಂದೆ ಸ್ವಚ್ಛ ಭಾರತ್ ಆಂದೋಲನವನ್ನು ಸಾಕಷ್ಟು ಉತ್ಸಾಹ ಮತ್ತು ಅಬ್ಬರದಿಂದ ಪ್ರಾರಂಭಿಸಲಾಗಿದ್ದರೂ ಕೂಡ ದಾಖಲೆಗಳು ಹೇಳುವಂತೆ ಇದು ತಲುಪಿರುವುದು ಗ್ರಾಮೀಣ ಜನಸಂಖ್ಯೆಯ ಶೇಕಡಾ 39 ರಷ್ಟು ಮಂದಿಯನ್ನು ಮಾತ್ರ. ನಿರ್ಮಿತ ಶೌಚಾಲಯಗಳ ಕುರಿತಾದ ಸರ್ಕಾರದ ಅಂಕಿಅಂಶಗಳು ಮತ್ತು ವಾಸ್ತವವಾಗಿ ಕಾರ್ಯರೂಪಕ್ಕೆ ಬಂದವುಗಳ ನಡುವೆ ತಾಳೆ ಆಗುತ್ತಿಲ್ಲ.
ಕೆಲವು ವರ್ಷಗಳ ಹಿಂದೆ ಎಂಟು ರಾಜ್ಯಗಳಲ್ಲಿ 'ವಾಟರ್ ಏಡ್' ಸಂಸ್ಥೆ ನಡೆಸಿದ ಅಧ್ಯಯನ ಅನೇಕ ಸಂಗತಿಗಳನ್ನು ಬಹಿರಂಗಪಡಿಸಿತು. ಶೌಚಾಲಯಗಳು ಪೂರ್ಣಗೊಂಡಂತೆ, ಅವುಗಳಲ್ಲಿ ಮೂರನೇ ಒಂದು ಭಾಗ ಮಾತ್ರ ಆರೋಗ್ಯ ಮತ್ತು ಸುರಕ್ಷತೆಯ ಮಾನದಂಡಗಳನ್ನು ಒಳಗೊಂಡಿವೆ. ಶೇ 35 ರಷ್ಟು ಶೌಚಾಲಯಗಳನ್ನು ದುರಸ್ತಿ ಮಾಡಬೇಕಿದೆ ಮತ್ತು ಉಳಿದವುಗಳು ಉಪಯೋಗ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇವೆ ಎಂದು ಅದು ಹೇಳಿದೆ. ರೈಸ್ (ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಕಂಪಾಶಿಯೇಟ್ ಎಕನಾಮಿಕ್ಸ್) ನಡೆಸಿದ ಅಧ್ಯಯನದ ಪ್ರಕಾರ, ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಶೇ 44 ರಷ್ಟು ಗ್ರಾಮೀಣ ಜನರಿಗೆ ಬಯಲು ಮಲವಿಸರ್ಜನೆ ಹೊರತುಪಡಿಸಿ ಬೇರೆ ದಾರಿ ಇಲ್ಲ.
ನೀರು ಮತ್ತು ಒಳಚರಂಡಿ ನಿರ್ವಹಣೆಯ ಕೊರತೆಯಿಂದಾಗಿ ಸ್ವಚ್ಛ ಭಾರತ್ ಯೋಜನೆಯ ಅಡಿ ನಿರ್ಮಾಣ ಮಾಡಲಾದ ಕೋಟ್ಯಂತರ ಶೌಚಾಲಯಗಳು ನಿಷ್ಪ್ರಯೋಜಕವಾದರೆ, ಅದು ತೆರಿಗೆ ಪಾವತಿ ಮಾಡುವವರ ಸಾವಿರಾರು ಕೋಟಿ ರೂಪಾಯಿ ಹಣವನ್ನು ವ್ಯರ್ಥ ಮಾಡಿದಂತೆ. ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆಗಾಗಿ ಮೂಡಿಸಲಾದ ಜಾಗೃತಿಯಂತೆಯೇ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಆಗಿದೆ. ಹಳೆಯ ಅಭ್ಯಾಸಗಳನ್ನು ತೊರೆಯುವಂತೆ ಮಾಡುವುದು, ಶೌಚಾಲಯದ ಬಳಕೆಯ ಕಡೆಗೆ ಜನರನ್ನು ಪ್ರೇರೇಪಿಸುವುದು ಹಾಗೂ ಮಾನವ ತ್ಯಾಜ್ಯವನ್ನು ಸಮರ್ಥವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ತರುವುದು ಸರ್ಕಾರದ ಮುಂದೆ ಇರುವ ಪ್ರಮುಖ ಸವಾಲುಗಳಾಗಿವೆ.
ಪರಿಸರ ಸ್ನೇಹಿ ಮತ್ತು ಮಿತವ್ಯಯದ ಜೈವಿಕ ಶೌಚಾಲಯಗಳನ್ನು ರೂಪಿಸಬೇಕು ಎಂಬ ಶಿಫಾರಸುಗಳನ್ನು ನಿರ್ಲಕ್ಷಿಸಿ ಲಕ್ಷಾಂತರ ಶೌಚಾಲಯಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡುವ, ಘಟನೆಗಳು ಪುನರಾವರ್ತನೆ ಆಗಬಾರದು. ಪರಿಸರ ಸ್ವಚ಼್ತೆಗೆ ಉತ್ತೇಜನ ನೀಡಲು ನಾಗರಿಕರ ಸಹಭಾಗಿತ್ವದೊಂದಿಗೆ ಸರ್ಕಾರದ ಕಾರ್ಯತಂತ್ರ ತೀವ್ರಗೊಳ್ಳಬೇಕಿದೆ. ಇಂತಹ ಆಮೂಲಾಗ್ರ ಬದಲಾವಣೆಯಿಂದ ಮಾತ್ರ ‘ಸ್ವಚ್ಛ ಭಾರತ’ ಮೂಡಿ ಬರಲಿದೆ.