ಕಥುವಾ(ಜಮ್ಮು ಕಾಶ್ಮೀರ): ಬೇಹುಗಾರಿಕೆಗಾಗಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿರಬಹುದೆಂದು ಶಂಕಿಸಲಾಗಿರುವ ಪಾರಿವಾಳವನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಡೆಡ್ ಸಂದೇಶವನ್ನು ಹೊಂದಿರುವ ಪಾರಿವಾಳ ಪಾಕಿಸ್ತಾನದಿಂದ ಈ ಕಡೆಗೆ ಹಾರಿದ ಕೂಡಲೇ ಹಿರಾನಗರ ಸೆಕ್ಟರ್‌ನ ಮಾನ್ಯರಿ ಗ್ರಾಮದ ನಿವಾಸಿಗಳು ಸೆರೆಹಿಡಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರು ನಿನ್ನೆ ಪಾರಿವಾಳವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಅದರ ಒಂದು ಕಾಲಿಗೆ ಕೆಲವು ಸಂಖ್ಯೆಗಳನ್ನು ಹೊಂದಿರುವ ರಿಂಗ್ ಜೋಡಿಸಲಾಗಿದೆ. ಕೋಡ್ವರ್ಡ್ ಸಂದೇಶವನ್ನು ಅರ್ಥ ಮಾಡಿಕೊಳ್ಳಲು ಸಂಬಂಧಪಟ್ಟ ಭದ್ರತಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕಥುವಾ ಹಿರಿಯ ಪೊಲೀಸ್ ವರಿಷ್ಟಾಧಿಕಾರಿ ಶೈಲೇಂದ್ರ ಮಿಶ್ರಾ ತಿಳಿಸಿದ್ದಾರೆ.