ನವದೆಹಲಿ: ಶಬರಿ ಮಲೆಗೆ ಮಹಿಳೆಯರ ಪ್ರವೇಶದ ಕುರಿತಾದ ಅರ್ಜಿಗಳ ವಿಚಾರಣೆ ಇಂದು ನಡೆದಿದೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ 9 ಮಂದಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಪೀಠ ಈ ವಿಚಾರಣೆ ನಡೆಸಿದೆ. ಈ ಪೀಠದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆರ್ ಭಾನುಮತಿ, ಅಶೋಕ್ ಭೂಷಣ್, ಎಲ್. ನಾಗೇಶ್ವರ ರಾವ್, ಮೋಹನ್ ಎಂ ಶಾಂತನಗೌಡರ್, ಎಸ್. ಅಬ್ದುಲ್ ನಜೀರ್, ಆ. ಸುಭಾಷ್ ರೆಡ್ಡಿ, ಬಿ.ಆರ್.ಗವಾಯಿ, ಸೂರ್ಯಕಾಂತ್ ಅವರಿದ್ದಾರೆ.
ಇಂದು ವಿಚಾರಣೆಯಾದ ಅರ್ಜಿ ಯಾವುದು..?
ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ರಚಿಸಲ್ಪಟ್ಟ ಒಂಬತ್ತು ಮಂದಿಯ ಸಾಂವಿಧಾನಿಕ ಪೀಠ ಒಟ್ಟಾಗಿ ಶಬರಿಮಲೆ ತೀರ್ಪಿನ ಮೇಲ್ವಿಚಾರಣೆಯ ಪ್ರಮುಖ ಅರ್ಜಿಯನ್ನು ತೆಗೆದುಕೊಳ್ಳದೇ ಹಿಂದೂ ದೇವಾಲಯಗಳು, ಮಸೀದಿಗಳು ಮುಂತಾದ ಧರ್ಮಗಳ ಶ್ರದ್ಧಾಕೇಂದ್ರಗಳಿಗೆ ಮಹಿಳೆಯರ ಪ್ರವೇಶ ಹಾಗೂ ಆ ಧರ್ಮಗಳಲ್ಲಿರುವ ಮಹಿಳಾ ವಿರೋಧಿ ನಿಯಮಗಳನ್ನು ಪ್ರಶ್ನಿಸುವ ಅರ್ಜಿಗಳನ್ನು ವಿಚಾರಣೆ ನಡೆಸಿತು. ಇದೇ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಸಿಜೆಐ ಎಸ್ಎ ಬೊಬ್ಡೆ '' ಈ ಸಾಂವಿಧಾನಿಕ ಪೀಠ ಶಬರಿಮಲೆಯ ವಿಚಾರವನ್ನು ಪರಿಶೀಲಿಸುತ್ತಿಲ್ಲ. ಅದರ ಬದಲಿಗೆ ನವೆಂಬರ್ 14ರಂದು ಶಬರಿಮಲೆ ವಿಚಾರ ಮರುಪರಿಶೀಲನಾ ಪೀಠ ನೀಡಿದ್ದ ತೀರ್ಪಿನ ವಿಚಾರಣೆ ಮಾತ್ರ ನಡೆಯುತ್ತಿದೆ '' ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ಇದೇ ರೀತಿಯ ಸುಮಾರು 50 ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ್ದು ವಿಶೇಷ.
ಅರ್ಜಿ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠದ ಅಭಿಪ್ರಾಯವೇನು..?
ರಿಟ್ ಅರ್ಜಿಯ ವಿಚಾರಣೆ ನಡೆಸಿದ ಪೀಠ ನಂಬಿಕೆ ಹಾಗೂ ಮೂಲ ಹಕ್ಕುಗಳ ನಡುವಿನ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಪರಾಮರ್ಶಿಸಿ ಹೊಸ ಚೌಕಟ್ಟನ್ನು ನಿರ್ಮಿಸುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದೆ. ಇದರ ಜೊತೆಗೆ ಮಸೀದಿಗಳು, ಪಾರ್ಸಿಗಳ ದೇಗುಲಗಳಾದ ಅಗ್ನಿ ದೇವಾಲಯಗಳಿಗೆ ಮಹಿಳೆಯರ ಪ್ರವೇಶ ಹಾಗೂ ದಾವೂದಿ ಬೊಹ್ರಾ ಸಮುದಾಯದಲ್ಲಿರುವ ಮಹಿಳಾ ವಿರೋಧಿ ಹಾಗೂ ಮೂಢನಂಬಿಕೆಯುಕ್ತದಂತಹ ಸಂಪ್ರದಾಯಗಳನ್ನು ಕೂಡಾ ಪರಾಮರ್ಶಿಸಬೇಕಾಗುತ್ತದೆ ಎಂದು ಒಪ್ಪಿಕೊಂಡಿದೆ.
ಈ ಕುರಿತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಜನವರಿ 17ರಂದು ವಕೀಲರ ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್ ಪೀಠ ಸೂಚಿಸಿದೆ. ಇಂತಹ ಧಾರ್ಮಿಕ ವಿಚಾರಗಳ ಬಗ್ಗೆ ವಕೀಲರ ನಿರ್ಧಾರ ಏನು ಎಂಬುದನ್ನು ತಿಳಿದುಕೊಳ್ಳುವಂತೆ ನಿರ್ದೇಶಿಸಲಾಗಿದೆ. ಈ ಸಭೆಯಲ್ಲಿ ಇನ್ಯಾವುದಾದರೂ ಧಾರ್ಮಿಕ ವಿಚಾರದ ಸೇರ್ಪಡೆ ಅಥವಾ ಪರಿಷ್ಕರಣೆ, ವಕೀಲರಿಗೆ ನೀಡಲಾಗಿರುವ ವಿಷಯಗಳು ಹಾಗೂ ಅವರಿಗೆ ನೀಡಿರುವ ಸಮಯದ ಬಗ್ಗೆ ತಿಳಿಸುವಂತೆ ಸುಪ್ರೀಂ ಪೀಠ ಸೂಚಿಸಿದೆ. ಸಾಲಿಸಿಟರ್ ಜನರಲ್ ನೇತೃತ್ವದ ವಕೀಲರ ಸಭೆಯ ನಂತರ ಅಂಶಗಳ ಆಧಾರವಾಗಿ ಸುಪ್ರೀಂ ಕೋರ್ಟ್ ಪೀಠ ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.