ನವದೆಹಲಿ: ಏಳು ದಶಕಗಳಷ್ಟು ಹಳೆಯದಾದ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳುತ್ತಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸುಪ್ರೀಂಕೋರ್ಟ್ನ ಸಿಜೆಐ ರಂಜನ್ ಗೊಗೊಯಿ ನೇತೃತ್ವದ ಪಂಚ ಪೀಠ ಇಂದು 10.30ಕ್ಕೆ ಅಯೋಧ್ಯೆ ಪ್ರಕರಣ ಐತಿಹಾಸಿಕ ತೀರ್ಪು ಪ್ರಕಟಿಸಲಿದ್ದು, ಇದೀಗ ಎಲ್ಲರ ಚಿತ್ತ ಸುಪ್ರೀಂಕೋರ್ಟ್ ತೀರ್ಪಿನತ್ತ ನೆಟ್ಟಿದೆ.
ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಆಗಸ್ಟ್ 6 ರಿಂದ ಸುಪ್ರೀಂಕೋಟ್ ನಿತ್ಯ ವಿಚಾರಣೆಯನ್ನು ಆರಂಭ ಮಾಡಿತ್ತು. 40 ದಿನಗಳ ಕಾಲ ಕೋರ್ಟ್ ನಿರಂತರ ವಿಚಾರಣೆ ನಡೆಸಿದೆ.
ತೀರ್ಪು ಪ್ರಕಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದ್ದು, 4 ಸಾವಿರ ಅರೆ ಸೇನಾ ಪಡೆ ನಿಯೋಜನೆ ಮಾಡಿ ಈಗಾಗಲೇ ಪಂಥಸಂಚಲನ ನಡೆಸಲಾಗುತ್ತಿದೆ. ಜತೆಗೆ ಅನುಮಾನಾಸ್ಪದ ಫೋನ್, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗಿದ್ದು, ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನ.17 ರಂದು ನಿವೃತ್ತಿ ಆಗಲಿರುವ ಹಿನ್ನೆಲೆಯಲ್ಲಿ ತೀರ್ಪು ಈ ವಾರ ಅಥವಾ ಮುಂದಿನ ವಾರ ಪ್ರಕಟವಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಇಂದು ತೀರ್ಪು ಪ್ರಕಟಗೊಳ್ಳುತ್ತಿದೆ. ಗೊಗೊಯಿ ನೇತೃತ್ವದ ಪಂಚಪೀಠದಲ್ಲಿ ಎಸ್. ಎ. ಬೊಬ್ಡೆ, DY ಚಂದ್ರಚೂಡ್, ಅಶೋಕ್ ಭೂಷಣ ಹಾಗೂ ಎಸ್.ಎ ನಜೀರ್ ಇರಲಿದ್ದಾರೆ.
ಇನ್ನು ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದವನ್ನು ಕೋರ್ಟ್ನಿಂದ ಹೊರಗಡೆ ಪರಿಹರಿಸಿಕೊಳ್ಳಲು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಫ್‍ಎಂಐ ಕಲೀಫುಲ್ಲಾ, ಧರ್ಮಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಮಂಚು ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಆದರೆ ಈ ವಿವಾದವನ್ನು ಬಗೆಹರಿಸಲು ಸಮಿತಿ ವಿಫಲವಾದ ಹಿನ್ನೆಲೆಯಲ್ಲಿ ಸಂವಿಧಾನ ಪೀಠ ದಿನನಿತ್ಯ ವಿಚಾರಣೆ ನಡೆಸಿತ್ತು.