ನವದೆಹಲಿ: ಅಸ್ಸಾಂನಲ್ಲಿ ನೆಲೆಸಿರುವ 70 ಸಾವಿರ ಬಾಂಗ್ಲಾ ಅಕ್ರಮ ವಲಸಿಗರು ಸ್ಥಳೀಯರೊಂದಿಗೆ ವಿಲೀನವಾಗಿದ್ದು ಅವರನ್ನು ಗುರುತಿಸುವುದು ಅಸಾಧ್ಯ ಎಂದು ಹೇಳಿರುವ ಅಲ್ಲಿನ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ.ಅಸ್ಸಾಂನಲ್ಲಿ ವಿದೇಶೀಯರ ಬಂಧನ ಪ್ರಕರಣದಲ್ಲಿ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಏಪ್ರಿಲ್ 8ಕ್ಕೆ ನಡೆಯಲಿರುವ ವಿಚಾರಣೆಗೆ ಅಸ್ಸಾಂ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಜರಾಗಬೇಕೆಂದು ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಅಸ್ಸಾಂ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ವಿಚಾರಣೆ ನಡೆಸಿದ್ದು ಇದುವರೆಗೆ ಸರ್ಕಾರ ಎಷ್ಟು ಸಂಖ್ಯೆಯ ಜನರನ್ನು ವಿದೇಶಿಗರು ಹಾಗೂ ಸ್ಥಳೀಯ ಬುಡಕಟ್ಟಿನವರೆಂದು ಘೋಷಿಸಿದೆ ಎನ್ನುವ ಅಂಕಿ ಅಂಶವನ್ನು ತಿಳಿಯಲು ನ್ಯಾಯಾಲಯ ಬಯಸಿದೆ. ಸುಪ್ರೀಂ ಕೋರ್ಟ್ ಜತೆ ಅಸ್ಸಾಂ ಸರ್ಕಾರ ಆಟವಾಡುತ್ತಿದೆ. ಸ್ಥಳೀಯರೊಂದಿಗೆ ವಿಲೀನಗೊಂಡಿರುವ ಅಕ್ರಮ ವಲಸಿಗರನ್ನು ಗುರುತಿಸಲು ಅಸಾಧ್ಯ ಎಂದು ಅಫಿಡವಿಟ್ ಸಲ್ಲಿಸಿರುವುದು ನಂಬಲಾಗದ ವಿಷಯ ಎಂದು ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.