ನವದೆಹಲಿ: ಮಧ್ಯ ಪ್ರದೇಶದಲ್ಲಿ ಉದ್ಭವವಾಗಿರುವ ರಾಜಕೀಯ ಬಿಕ್ಕಟ್ಟು ನಾಳೆ ಅಂತ್ಯ ಕಾಣುವ ಲಕ್ಷಣ ಕಂಡುಬಂದಿದ್ದು, ನಾಳೆಯೇ ವಿಶ್ವಾಸ ಮತಯಾಚನೆ ಮಾಡುವಂತೆ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಕಾಂಗ್ರೆಸ್ ಸರ್ಕಾರದ ಬುಹುಮತ ಸಾಬೀತಿಗೆ ಆಗ್ರಹಿಸಿ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಆದೇಶ ಹೊರಡಿಸಿದೆ.
ಕಳೆದ ಕೆಲದಿನಗಳ ಹಿಂದೆ ಮಧ್ಯ ಪ್ರದೇಶ ಕಾಂಗ್ರೆಸ್ ಸರ್ಕಾರದ 22 ಶಾಸಕರು ಬಂಡಾಯವೆದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಎಲ್ಲಾ ಶಾಸಕರು ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಪಕ್ಷದ ಪ್ರಬಲ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅದಾಗಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಎಂಪಿ ಕಾಂಗ್ರೆಸ್ಗೆ ದೊಡ್ಡ ಹೊಡೆತ ನೀಡಿತ್ತು.
ಮಾರ್ಚ್ 16ರಂದು ಎಂಪಿ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ, ರಾಜ್ಯಪಾಲ ಲಾಲ್ ಜಿ ಟಂಡನ್ ಸೂಚನೆಯಂತೆ ಸಿಎಂ ಕಮಲ್ನಾಥ್ ವಿಶ್ವಾಸ ಮತಯಾಚನೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕೊರೊನಾದಿಂದಾಗಿ ಸದನದ ಕಲಾಪವನ್ನು ಮುಂದೂಡಲಾಗಿತ್ತು.
ಆ ಬಳಿಕ ಕಾಂಗ್ರೆಸ್ ಸರ್ಕಾರದ ಬುಹುಮತ ಸಾಬೀತಿಗೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಬಿಜೆಪಿ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 22 ಶಾಸಕರು ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಶಾಸಕರ ರಾಜೀನಾಮೆ ಹಿನ್ನೆಲೆ ಬಹುಮತ ಸಾಬೀತು ಪ್ರಕ್ರಿಯೆ ಕೈಗೊಳ್ಳುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ನಲ್ಲಿ ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಮಧ್ಯ ಪ್ರದೇಶದ ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ನಾಳೆ ಮತ್ತೆ ಮಧ್ಯ ಪ್ರದೇಶದಲ್ಲಿ ವಿಧಾನ ಸಭೆ ಕಾಲಾಪದಲ್ಲಿ ಸಿಎಂ ಕಮಲ್ನಾಥ್ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.