ಜೈಪುರ್: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಲ್ಲಿಯವರೆಗೆ ಡೆಡ್ಲಿ ವೈರಸ್ಗಾಗಿ ಯಾವುದೇ ರೀತಿಯ ಔಷಧಿ ಕಂಡು ಹಿಡಿದಿಲ್ಲ. ಇದರ ಮಧ್ಯೆ ಜೈಪುರ್ ಸವಾಯಿ ಮಾನಸಿಂಗ್ ಆಸ್ಪತ್ರೆಯಲ್ಲಿ ಪ್ರಯೋಗಾತ್ಮಕವಾಗಿ ನಡೆಸಿರುವ ಪ್ಲಾಸ್ಮಾ ಥೆರೆಪಿ ಯಶಸ್ವಿಯಾಗಿದೆ.
ಪ್ಲಾಸ್ಮಾ ಥೆರೆಪಿ ಪ್ರಯೋಗ ಯಶಸ್ವಿಯಾಗಿರುವ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೋಂಕಿತರಿಗೆ ಇದೇ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದಾರೆ. ನಿನ್ನೆ ಪ್ರಯೋಗಾರ್ಥವಾಗಿ ಇಬ್ಬರು ಕೊರೊನಾ ಸೋಂಕಿತರಿಗೆ ಈ ಚಿಕಿತ್ಸೆ ನೀಡಲಾಗಿದ್ದು, ಅದು ಶೇ.100ರಷ್ಟು ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ನವದೆಹಲಿ ಹಾಗೂ ಮಧ್ಯಪ್ರದೇಶದಲ್ಲಿ ಪ್ಲಾಸ್ಮಾ ಥೆರೆಪಿ ನೀಡಲಾಗುತ್ತಿದ್ದು, ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಪ್ಲಾಸ್ಮಾ ಥೆರೆಪಿಯಲ್ಲಿ ಈಗಾಗಲೇ ಸೋಂಕಿನಿಂದ ಗುಣಮುಖರಾಗಿರುವ ವ್ಯಕ್ತಿಗಳಿಂದ ಪ್ಲಾಸ್ಮಾ ತೆಗೆದುಕೊಂಡು ಸೋಂಕಿತರಿಗೆ ಹಾಕಲಾಗುವುದರಿಂದ ಅವರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ.
ಇದೇ ವಿಷಯವಾಗಿ ಈ ಹಿಂದೆ ಮಾತನಾಡಿದ್ದ ಕೇಂದ್ರ ಸರ್ಕಾರ ಪ್ಲಾಸ್ಮಾ ಥೆರೆಪಿ ನೀಡುತ್ತಿರುವುದರಿಂದ ಕೊರೊನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ ಎಂದಿದ್ದರು.