ಮೆಸಾಚುಸೆಟ್ಸ್ (ಯುಎಸ್‌ಎ) : ಕೊರೊನಾ ವೈರಸ್ ಬಿಕ್ಕಟ್ಟಿನ ಕಪಿಮುಷ್ಠಿಗೆ ಇಡೀ ಜಗತ್ತು ಸಿಲುಕಿದೆ. ಇಂತಹ ಹೊತ್ತಿನಲ್ಲಿಯೇ ಬೋಸ್ಟನ್‌ನ ಎರಡು ಆಸ್ಪತ್ರೆಗಳ ವೈದ್ಯರು ಅಧ್ಯಯನವೊಂದನ್ನು ನಡೆಸಿದ್ದಾರೆ. ಆ ಸಂಶೋಧನೆಯ ಪ್ರಕಾರ, ಐಸಿಯುನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯಬೇಕಾದ ಕೋವಿಡ್ – 19ನಿಂದ ಬಳಲುತ್ತಿರುವ ಬಹುತೇಕ ರೋಗಿಗಳು ಅಸ್ತಿತ್ವದಲ್ಲಿ ಇರುವ ಮಾರ್ಗಸೂಚಿ ಬೆಂಬಲಿತ ಪ್ರಮಾಣೀಕೃತ ಚಿಕಿತ್ಸೆ ಪಡೆದರೆ ಸಾಕು ಬದುಕಿ ಉಳಿಯುತ್ತಾರೆ.
ಮೆಸಾಚುಸೆಟ್ಸ್ ಸಾರ್ವಜನಿಕ ಆಸ್ಪತ್ರೆ (ಎಂಜಿಹೆಚ್) ಮತ್ತು ಬೆತ್ ಇಸ್ರೇಲ್ ಡಿಕಾನೆಸ್ ವೈದ್ಯಕೀಯ ಕೇಂದ್ರದ ವೈದ್ಯರು ಒಗ್ಗೂಡಿ, ವೆಂಟಿಲೇಟರ್‌ಗಳು ಅಗತ್ಯ ಎಂಬ ಹಂತಕ್ಕೆ ತಲುಪಿರುವ ಕೋವಿಡ್ ರೋಗಿಗಳ ಕುರಿತು ಅಧ್ಯಯನ ನಡೆಸಿದರು. ಈ ಅಧ್ಯಯನವನ್ನು ಅಮೆರಿಕನ್ ಜರ್ನಲ್ ಆಫ್ ರೆಸ್ಪಿರೇಟರಿ ಆ್ಯಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ.
ಜಗತ್ತಿನೆಲ್ಲೆಡೆ ಇರುವ ಆಸ್ಪತ್ರೆಗಳು ಈ ಸಾಂಕ್ರಾಮಿಕ ರೋಗಪೀಡಿತರಿಗೆ ಸಹಾಯ ಮಾಡುವ ಉದ್ದೇಶದಿಂದ ತಾವು ನೀಡಿದ ಚಿಕಿತ್ಸೆಯ ಅನುಭವಗಳನ್ನು ಹಂಚಿಕೊಂಡಿವೆ. ಆದರೆ ಆ ಅನುಭವಗಳು ಯಾವಾಗಲೂ ಉತ್ತಮ ಚಿಕಿತ್ಸಾ ಕಾರ್ಯಸೂಚಿಗಳನ್ನು ಬಹಿರಂಗಪಡಿಸಿವೆ ಎಂದೇನೂ ಅಲ್ಲ ಮತ್ತು ಅವು ಹಾನಿಗೂ ಕೂಡ ಕಾರಣವಾಗಬಹುದು. ಹೆಚ್ಚು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಎಂಜಿಹೆಚ್ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಸಹಾಯಕ ಪ್ರಾಧ್ಯಾಪಕ ಸಿ.ಕೋರೆ ಹಾರ್ಡಿನ್ (ಎಂಡಿ, ಪಿಹೆಚ್‌ಡಿ) ನೇತೃತ್ವದ ತಂಡ, ಕೋವಿಡ್‌ಗೆ ತುತ್ತಾಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಹಾಗೂ ವೆಂಟಿಲೇಟರ್ ಚಿಕಿತ್ಸೆಗೆ ಒಳಗಾಗಿದ್ದ 66 ರೋಗಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ತಾವು ಪಡೆದ ಆರೈಕೆಗೆ ರೋಗಿಗಳ ಸ್ಪಂದನೆ ಹೇಗಿತ್ತು ಎಂಬುದನ್ನು ಗುರುತಿಸಿದರು.
ಗಂಭೀರ ಕೋವಿಡ್ –19 ಪ್ರಕರಣಗಳು ತೀವ್ರವಾದ ಉಸಿರಾಟದ ತೊಂದರೆ ರೋಗಲಕ್ಷಣಗಳಿಗೆ (ARDS) ಕಾರಣ ಆಗುತ್ತವೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಎಆರ್‌ಡಿಎಸ್ ಎಂಬುದು ವ್ಯಾಪಕ ರೀತಿಯ ರೋಗಕಾರಕಗಳಿಂದ ಉಂಟಾಗುವ ಮಾರಣಾಂತಿಕ ಶ್ವಾಸಕೋಶದ ಸ್ಥಿತಿಯಾಗಿದೆ. ಡಾ.ಹಾರ್ಡಿನ್ ಅವರು, ಒಳ್ಳೆಯ ಸುದ್ದಿ ಎಂದರೆ ನಾವು 50 ವರ್ಷಗಳಿಂದ ಎಆರ್‌ಡಿಎಸ್ ಅನ್ನು ಅಧ್ಯಯನ ಮಾಡುತ್ತಿದ್ದೇವೆ ಮತ್ತು ಅದಕ್ಕೆ ಚಿಕಿತ್ಸೆ ನೀಡಲು ಹಲವಾರು ಸಾಕ್ಷ್ಯಾಧಾರಗಳಿಂದ ಕೂಡಿದ ಚಿಕಿತ್ಸೆಯನ್ನು ನಾವು ನೀಡುತ್ತಿದ್ದೇವೆ ಎಂದಿದ್ದಾರೆ.
ಅವರು ಮುಂದುವರಿದು, ಅಧ್ಯಯನದ ವೇಳೆ ರೋಗಿಗಳಿಗೆ ತಮ್ಮ ಉದರದ ಮೇಲೆ ಕಾರ್ಯನಿರ್ವಹಿಸುವ ಪ್ರೋನ್ ವೆಂಟಿಲೇಟರ್ ರೀತಿಯ ಚಿಕಿತ್ಸಾ ವಿಧಾನಗಳನ್ನು ಒದಗಿಸಿದೆವು. ಆಗ ಆ ರೋಗಿಗಳ ಸ್ಪಂದನ ಎ ಆರ್ ಡಿ ಎಸ್ ಗೆ ರೋಗಿಗಳು ನೀಡುತ್ತಿದ್ದ ರೀತಿಯಲ್ಲಿಯೇ ಇತ್ತು" ಎಂದು ಹಾರ್ಡಿನ್ ತಿಳಿಸಿದ್ದಾರೆ. ಮುಖ್ಯವಾಗಿ, ಕೋವಿಡ್ – 19 ರೋಗದಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳಲ್ಲಿ ಈ ರೀತಿ ಚಿಕಿತ್ಸೆ ನೀಡಿದಾಗ ಸಾವಿನ ಪ್ರಮಾಣವು ಶೇಕಡಾ 16.7ರಷ್ಟು ಇದ್ದು ಇದು ಉಳಿದ ಆಸ್ಪತ್ರೆಗಳಲ್ಲಿ ಉಂಟಾದ ಸಾವಿನ ಪ್ರಮಾಣವನ್ನು ಮೀರಿರಲಿಲ್ಲ. ಅಲ್ಲದೆ, ಸರಾಸರಿ 34 ದಿನಗಳ ನಂತರ, ವೆಂಟಿಲೇಟರ್‌ಗಳಲ್ಲಿದ್ದ ಶೇಕಡಾ 75.8 ರಷ್ಟು ರೋಗಿಗಳನ್ನು ತೀವ್ರ ನಿಗಾ ಘಟಕದಿಂದ ಬಿಡುಗಡೆ ಮಾಡಲಾಗಿದೆ.
ಮಾಸ್ ಜನರಲ್‌ನಲ್ಲಿ ಮೆಡಿಸಿನ್ ಇನ್ ಸ್ಟ್ರಕ್ಟರ್ ಆಗಿರುವ ಮತ್ತು ಸಂಶೋಧನಾ ವರದಿಯ ಸಹ ಲೇಖಕರೂ ಆದ ಜೆಹನ್ ಅಲ್ಲಾಡಿನಾ “ಇದರ ಆಧಾರದ ಮೇಲೆ ಕೋವಿಡ್ - 19ರ ಕಾರಣದಿಂದಾಗಿ ಉಸಿರಾಟದ ವೈಫಲ್ಯಕ್ಕೆ ತುತ್ತಾದ ರೋಗಿಗಳಿಗೆ ಸಾಕ್ಷ್ಯ ಆಧಾರಿತ ಎ ಆರ್ ಡಿ ಎಸ್ ಚಿಕಿತ್ಸೆಯನ್ನು ವೈದ್ಯರು ಒದಗಿಸಬೇಕು ಎಂದು ನಾವು ಶಿಫಾರಸು ಮಾಡುತ್ತೇವೆ ಮತ್ತು ರೋಗಕ್ಕೆ ಚಿಕಿತ್ಸೆ ನೀಡಲು ಪ್ರಮಾಣೀಕೃತ ವೈದ್ಯಕೀಯ ಪ್ರಯೋಗಗಳನ್ನು ಆಯ್ದುಕೊಳ್ಳಬೇಕು ”ಎನ್ನುತ್ತಾರೆ.