ಮಲಪ್ಪುರಂ: ಸುಳ್ಳಾ ಮುಸ್ಲಿಂ ಓರಿಯಂಟಲ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು 150ನೇ ಗಾಂಧಿ ಜಯಂತಿ ಹಿನ್ನೆಲೆ ದಂಡಿಯಾತ್ರೆಯನ್ನು ಮರುಸೃಷ್ಟಿಸಿದ್ದರು. ಉಪ್ಪು ತಯಾರು ಮಾಡುವ ಪರಿಯನ್ನು ಮರುಸೃಷ್ಟಿಸಲಾಗಿತ್ತು. ವಿದ್ಯಾರ್ಥಿಗಳು ನಡೆಸಿದ ದಂಡಿಯಾತ್ರೆ ಪ್ರದರ್ಶನದಲ್ಲಿ ಗಾಂಧಿ ಅವರನ್ನು ಹೋಲುವ ಚಾಚಾ ಶಿವರಾಜನ್, ಮಹಾತ್ಮ ಗಾಂಧಿ ಪಾತ್ರವನ್ನು ನಿರ್ವಹಿಸಿದರು. ಗಾಂಧಿಯನ್ನು ಅನುಸರಿಸಿದ ಸರೋಜಿನಿ ನಾಯ್ಡು, ಮನಿಲಾಲ್ ಗಾಂಧಿ ಮತ್ತು ಮಿಥು ಬೆನ್ ಅವರಂತೆ ವೇಷಭೂಷಣ ಧರಿಸಿ ದಂಡಿಯಾತ್ರೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅರಿಕೋಡ್ ಗ್ರಾಮ ಕಚೇರಿಯ ಬಳಿ ಸ್ಥಾಪಿಸಲಾದ ಆಶ್ರಮದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಾಲಿಯರ್ ನದಿ ತೀರದಲ್ಲಿ ಸಾಂಕೇತಿಕ ಉಪ್ಪು ತಯಾರಿಕೆಯೊಂದಿಗೆ ದಂಡಿಯಾತ್ರೆ ಕೊನೆಗೊಂಡಿತು.
ಚಾಚಾ ಶಿವರಾಜನ್, ಗಾಂಧಿ ಪಾತ್ರ ನಿರ್ವಹಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಹೊಸ ಪೀಳಿಗೆಗೆ ಸಹಿಷ್ಣುತೆಯನ್ನು ಪರಿಚಯಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಪ್ರಾಂಶುಪಾಲ ಕೆ.ಟಿ.ಮುನೀಬ್ ರೆಹಮಾನ್ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸಿ.ಪಿ.ಕರೀಮ್, ವ್ಯವಸ್ಥಾಪಕ ಕೆ.ಸಲಾಮ್ ಮಾಸ್ಟರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ವಿ.ಎಂ ಜಕಾರಿಯಾ, ಶಾಲಾ ಸಿಬ್ಬಂದಿ ಮತ್ತು ಅನೇಕರು ಭಾಗವಹಿಸಿದ್ದರು.