ಹೈದರಾಬಾದ್: ಭಾರತ-ಚೀನಾ ನಡುವಿನ ಬಾಂಧವ್ಯ ಸದ್ಯ ಸುಧಾರಿಸಿದ್ದು 'ಒಳ್ಳೆಯ ದೋಸ್ತಿಗಳು' ಎಂದು ಹೇಳುವುದರಲ್ಲಿ ತಪ್ಪಾಗೋದಿಲ್ಲ. ಆದರೆ, ಉಭಯ ದೇಶಗಳ ನಡುವಿನ ಯುದ್ಧ ಹಾಗೂ ಜಮ್ಮುಕಾಶ್ಮೀರ ಗಡಿ ವಿಚಾರದಲ್ಲಿ ಪಾಕ್ ಪರ ಬ್ಯಾಟ್ ಬೀಸುತ್ತಿರುವ ಚೀನಾ ನಡೆಗೆ ಭಾರತ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದೆ. ಇದರ ಮಧ್ಯೆ ಕೂಡ ಎರಡು ದೇಶದ ನಾಯಕರು ಮೇಲಿಂದ ಮೇಲೆ ಭೇಟಿಯಾಗುತ್ತಿದ್ದಾರೆ.
ಇಂಡೋ-ಚೀನಾ ನಡುವಿನ ಹಿಂದಿನ ಒಪ್ಪಂದ, ಉಭಯ ದೇಶಗಳ ನಡುವೆ ನಡೆದ ಮಾತುಕತೆ ಹಾಗೂ ಭೇಟಿಗೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಸಮಿತ್ ಶರ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರುಣಾಚಲ ಪ್ರದೇಶದ ಸೋಮ್ದೂರಾಂಗ್ಚು ಪ್ರದೇಶದಲ್ಲಿ ಚೀನಾ ಯೋಧರು 1986ರಲ್ಲಿ ಅತಿಕ್ರಮಣ ಮಾಡಿದಾಗ ಭಾರತೀಯ ಸೇನೆ ಸರಿಯಾದ ಪ್ರತ್ಯುತ್ತರ ನೀಡಿ ತಿರುಗೇಟು ನೀಡಿತ್ತು. ಇದಾದ ಬಳಿಕ 1988ರಲ್ಲಿ ಮೊದಲ ಬಾರಿಗೆ ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬೀಜಿಂಗ್ನಲ್ಲಿ ಅಧ್ಯಕ್ಷ ಲಿ ಪೆಂಗ್ ದ್ವಿಪಕ್ಷೀಯ ಮಾತುಕತೆ ಹಮ್ಮಿಕೊಳ್ಳುತ್ತಾರೆ. ಭಾರತದ ಇತಿಹಾಸದಲ್ಲಿ 34 ವರ್ಷದ ಬಳಿಕ ಭಾರತದ ಪ್ರಧಾನಿ, ಚೀನಾ ಪ್ರವಾಸ ಕೈಗೊಂಡು ದಾಖಲೆ ನಿರ್ಮಿಸಿ ಉಭಯ ದೇಶಗಳ ಗಡಿ ಸಮಸ್ಯೆ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ಇದೇ ವೇಳೆ ಟಿಬೇಟಿಯನ್ನರ ಸ್ಥಾನಮಾನ ಪುನರ್ ಸ್ಥಾಪನೆ ಮಾಡಲು ಏಳು ವರ್ಷದ ಒಪ್ಪಂದವನ್ನೂ ಮಾಡಿಕೊಳ್ಳಲಾಯಿತು. ಆದರೆ ಡೋಕ್ಲಾಮ್ ವಿಚಾರವಾಗಿ ಎರಡು ದೇಶಗಳ ನಡುವೆ ಬರೋಬ್ಬರಿ 73 ದಿನಗಳ ಕಾಲ ಉದ್ವಿಗ್ನ ವಾತಾವರಣ ಉಂಟಾಗುತ್ತದೆ. ಭೂತಾನ್ ಸಮಸ್ಯೆ ಸಹ ಈ ವೇಳೆ ಉದ್ಭವಗೊಂಡಿದ್ದರಿಂದ ಸದ್ಯದ ಸ್ಥಿತಿಯಲ್ಲೂ ಈ ವಿಚಾರದಲ್ಲಿ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಆದರೆ, 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷರೊಂದಿಗೆ ವುಹಾನ್ನಲ್ಲಿ ನಡೆದ ಮೊದಲ ಅನೌಪಚಾರಿಕ ಶೃಂಗಸಭೆ ಈ ಸಮಸ್ಯೆ ಬಗೆಹರಿಸಲು ದಾರಿ ಮಾಡಿಕೊಟ್ಟಿತ್ತು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮರು ಸ್ಥಾಪನೆ ಮಾಡಲು ಮೋದಿ-ಕ್ಸಿ ಜಿನ್ ಪಿಂಗ್ ಮಾತುಕತೆ ನಡೆಸುತ್ತಾರೆ. ಸದ್ಯ ಉಭಯ ನಾಯಕರು ಐತಿಹಾಸಿಕ ಮಹಾಬಲಿಪುರಂನಲ್ಲಿ ಭೇಟಿಯಾಗಿದ್ದು ಉಭಯ ದೇಶಗಳ ಬಾಂಧವ್ಯ ವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು.
ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆ, ಕಾಶ್ಮೀರ ಗಡಿ ವಿಚಾರ ಹಾಗೂ ಪಾಕಿಸ್ತಾನದೊಂದಿಗಿನ ಸಂಬಂಧ ನಡುವೆ ಉಭಯ ನಾಯಕರು ಭೇಟಿ ಮಾಡುತ್ತಿದ್ದಾರೆ. ವಿಶೇಷವೆಂದರೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ದುಗೊಂಡ ಬಳಿಕ ವಿಶ್ವಸಂಸ್ಥೆಯಲ್ಲಿ ಪಾಕ್ ಪರ ಚೀನಾ ಬೆಂಬಲ ಸೂಚಿಸಿದೆ. ಕಳೆದ ಕೆಲ ದಿನಗಳ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾ ಪ್ರವಾಸ ಕೈಗೊಂಡಿದ್ದ ವೇಳೆ ಜಂಟಿ ಸುದ್ದಿಗೋಷ್ಠಿ ವೇಳೆ ಜಮ್ಮು-ಕಾಶ್ಮೀರ ವಿಚಾರ ಉಲ್ಲೇಖ ಮಾಡಲಾಗಿತ್ತು.
ವುಹಾನ್ ಶೃಂಗಸಭೆ ನಂತರ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಐದು ಬಾರಿ ಭೇಟಿ ಮಾಡಿದ್ದು, ಇದೀಗ ಐತಿಹಾಸಿಕ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಮತ್ತೊಮ್ಮೆ ಕ್ಸಿ ಜಿನ್ ಪಿಂಗ್ ಅವರ ಭೇಟಿ ಮಾಡುತ್ತಿದ್ದಾರೆ. ಏಷ್ಯಾದ ಎರಡು ದೈತ್ಯ ರಾಷ್ಟ್ರದ ನಾಯಕರ ಈ ಭೇಟಿ ಮಹತ್ವ ಪಡೆದುಕೊಂಡಿದ್ದು, ಸದ್ಯದ ಸ್ಥಿತಿಯಲ್ಲಿ ಚೀನಾದ ಜಿಡಿಪಿ $14 ಟ್ರಿಲಿಯನ್ ಇದೆ. ಭಾರತದ ಜಿಡಿಪಿ ಮಾತ್ರ $2.8 ಟ್ರಿಲಿಯನ್ ಇದೆ. ಚೀನಾದ ಒಟ್ಟು ಜಿಡಿಪಿ ಐದು ಪಟ್ಟು ದೊಡ್ಡದಾಗಿದೆ. ಇದೀಗ ವ್ಯಾಪಾರ ವೃದ್ಧಿಗಾಗಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
1962ರ ಯುದ್ಧದ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಯುದ್ಧ ನಡೆದಿತ್ತು. ಆದರೆ ಆ ಅಹಿತಕರ ಸಂಗತಿ ಮರೆತು ಭವಿಷ್ಯದತ್ತ ನೋಡುವ ಕ್ಷಣ ಇದೀಗ ಬಂದಿದೆ ಎಂದು ಈ ಹಿಂದೆ ರಾಜೀವ್ ಗಾಂಧಿ ಸಹ ಹೇಳಿದ್ದರು. 1991ರಲ್ಲಿ ಚೀನಾ ಅಧ್ಯಕ್ಷ ದೆಹಲಿಗೆ ಆಗಮಿಸಿದ್ದ ವೇಳೆ ಚೀನಾ-ಭಾರತ ಯಾವುದೇ ವಿವಾದದಲ್ಲಿ ಸಿಲುಕಿಕೊಳ್ಳುವುದಿಲ್ಲ, ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗುತ್ತವೆ ಎಂದಿದ್ದರು.
ಸದ್ಯ ಕೂಡ ಪ್ರಧಾನಿ ಮೋದಿ ಹಾಗೂ ಕ್ಸಿ ಆಶಾದಾಯಕವಾಗಿ ಅಭಿವೃದ್ಧಿಯತ್ತ ಮುಂದೆ ಸಾಗುವ ಮಾರ್ಗ ಕಂಡುಕೊಂಡಿದ್ದು, ಶಾಂತಿ ಮತ್ತು ನೆಮ್ಮದಿಯ ಸ್ಥಿತಿ ಕಾಪಾಡಿಕೊಳ್ಳಬೇಕಿರುವುದು ಮುಖ್ಯವಾಗಿರುತ್ತದೆ. ಜತೆಗೆ ಉಭಯ ದೇಶಗಳ ನಡುವಿನ ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವ ಅವಶ್ಯಕತೆಯೂ ಇದೆ.