ಪಾಟ್ನಾ(ಬಿಹಾರ್): ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದ ತನಿಖೆಯು ಡ್ರಗ್ ಕಾರ್ಟೆಲ್‌ಗಳನ್ನು ಮತ್ತು ಹಲವಾರು ಪ್ರಭಾವಿಗಳ ಹೆಸರುಗಳನ್ನು ಬಹಿರಂಗಪಡಿಸುತ್ತದೆ ಎಂದು ಭೋಜ್‌ಪುರಿ ನಟ ಮತ್ತು ಬಿಜೆಪಿ ಸಂಸದ ರವಿ ಕಿಶನ್ ಭಾನುವಾರ ಹೇಳಿದ್ದಾರೆ.
'ಈ ವಿಚಾರ ಆರಂಭದಲ್ಲಿ ನನಗೆ ಸಾಕಷ್ಟು ಆಘಾತಕಾರಿಯೆನಿಸಿತು. ಆದರೆ ಉದ್ಯಮದಲ್ಲಿ ಇಂತಹ ಸಂಗತಿಗಳು ಆಗಾಗ್ಗೆ ನಡೆಯುತ್ತಿರುತ್ತವೆ ಎಂದು ತಿಳಿದಿತ್ತು. ಈ ಡ್ರಗ್ ಜಾಲವು ಹಲವಾರು ನೂರು ಕೋಟಿಗಳ ಮೌಲ್ಯದ್ದಾಗಿದೆ. ಇದು ಎಲ್ಎಸ್ಡಿ, ಕೊಕೇನ್, ಎಂಡಿ ಮುಂತಾದ ವಿಧಗಳಲ್ಲಿ ಲಭ್ಯವಿದೆ. ಇನ್ನೂ ರೇವ್ ಪಾರ್ಟಿಗಳಲ್ಲಿ ಸುಲಭವಾಗಿ ದೊರೆಯುವ ಇವು ಸಾಮಾನ್ಯ ಜನರ ವ್ಯಾಪ್ತಿಯಲ್ಲಿಲ್ಲ. ತನಿಖೆಯಿಂದ ಅನೇಕ ದೊಡ್ಡ ಹೆಸರುಗಳು ಬಹಿರಂಗಗೊಳ್ಳಲಿವೆ' ಎಂದು ಕಿಶನ್ ಮಾಧ್ಯಮದವರಿಗೆ ತಿಳಿಸಿದರು.
'ಚಲನಚಿತ್ರೋದ್ಯಮದ ಜನರು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರುತ್ತಾರೆ ಮತ್ತು ಇಂತಹ ವಿಷಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತಿದ್ದೆ. ಆದರೆ, ಹಲವಾರು ಜನರು ಭಾಗಿಯಾಗಿದ್ದಾರೆಂದು ನಾನು ಇತ್ತೀಚೆಗೆ ತಿಳಿದುಕೊಂಡೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇದನ್ನು ಶೀಘ್ರದಲ್ಲಿಯೇ ಬೇಧಿಸಬೇಕು. ಅವುಗಳ ಮೂಲ, ದೇಶದಾದ್ಯಂತ ಹೇಗೆ ಸಾಗಿಸಲಾಗುತ್ತದೆ ಎಂಬುದನ್ನು ಬಹೀರಂಗ ಮಾಡಬೇಕು'ಎಂದು ಹೇಳಿದರು.
'ದಿವಂಗತ ನಟ ಸುಶಾಂತ್ ಸಾವಿನ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಾನು ನಂಬುತ್ತೇನೆ' ಎಂದು ಅವರು ಹೇಳಿದರು.