ನವದೆಹಲಿ: ದೇಶಾದ್ಯಂತ ವಿಧಿಸಲಾಗಿರುವ 21 ದಿನಗಳ ಲಾಕ್‌ಡೌನ್ ನಿರ್ಧಾರವನ್ನು ಬೆಂಬಲಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅಗತ್ಯ ವಸ್ತುಗಳ ಸರಬರಾಜು ಸುಗಮಗೊಳಿಸಿ ವೈದ್ಯರು, ಶುಶ್ರೂಷಕಿರು ಮತ್ತು ಆರೋಗ್ಯ ವೃತ್ತಿಪರರನ್ನು ಸಂರಕ್ಷಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ.
ಆತ್ಮೀಯ ಪ್ರಧಾನಿ, ಕೊರೊನಾ ವೈರಸ್ ವಿರುದ್ಧ ಹೋರಾಡುವ ಕ್ರಮವಾಗಿ ನೀವು ಘೋಷಿಸಿದ 21 ದಿನಗಳ 'ರಾಷ್ಟ್ರವ್ಯಾಪಿ ಲಾಕ್‌ಡೌನ್' ಸ್ವಾಗತಾರ್ಹ ಹೆಜ್ಜೆಯಾಗಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಹಾಗೂ ಸಹಕರಿಸುತ್ತೇವೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳಲು ಬಯಸುತ್ತೇನೆ' ಎಂದಿದ್ದಾರೆ.
ಈ ಸವಾಲಿನ ಮತ್ತು ಅನಿಶ್ಚಿತ ಸಮಯದಲ್ಲಿ ಪ್ರತಿಯೊಬ್ಬರೂ ಪಕ್ಷದ ಹಿತಾಸಕ್ತಿಗಳ ಬಿಟ್ಟು ಬರುವುದು ಕಡ್ಡಾಯವಾಗಿದೆ. ಇದು ನಮ್ಮ ದೇಶ. ಮಾನವೀಯತೆ ಬಗೆಗಿನ ಕರ್ತವ್ಯವನ್ನು ಗೌರವಿಸಬೇಕು. ಇದು ಒಗ್ಗಟ್ಟಿನ ಮತ್ತು ಸಹಕಾರದ ಅಗತ್ಯವಾದ ಸಮಯ. ಆದ್ದರಿಂದ ನಾವು, ಬೃಹತ್ ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ನಮ್ಮ ಸಮಾಜದ ದುರ್ಬಲ ವರ್ಗದವರು ಅನುಭವಿಸುವ ಅಪಾರ ಆರ್ಥಿಕ ಮತ್ತು ಅಸ್ತಿತ್ವದ ನೋವನ್ನು ನಿವಾರಿಸಬೇಕಿದೆ. ಅದಕ್ಕಾಗಿ ನಾನು ನಂಬುವ ಕೆಲವು ಕ್ರಮಗಳನ್ನು ಸೂಚಿಸಲು ಬಯಸುತ್ತೇನೆ. ಶೀಘ್ರದಲ್ಲೇ ಅವುಗಳನ್ನು ಜಾರಿಗೆ ತರುತ್ತೀರಾ ಎಂಬ ಭರವಸೆ ಇದೆ ಎಂದು ಉಲ್ಲೇಖಿಸಿದ್ದಾರೆ.
ಮುಂದಿನ ದಿನಗಳಲ್ಲಿ ವೈರಸ್ ಇನ್ನಷ್ಟು ಹೆಚ್ಚಾಗಬಹುದು. ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಐಸಿಯು ಮತ್ತು ವೆಂಟಿಲೇಟರ್‌ಗಳ ತಾತ್ಕಾಲಿಕ ಸೌಲಭ್ಯಗಳನ್ನು ತಕ್ಷಣವೇ ಕೇಂದ್ರ ಒದಗಿಸಬೇಕು. ಕೇಂದ್ರ ಸರ್ಕಾರ ತಕ್ಷಣವೇ ಈ ಬಗ್ಗೆ ಆಯೋಗ ರಚಿಸಬೇಕು. 2020ರ ಮಾರ್ಚ್ 1ರಿಂದ ಆರು ತಿಂಗಳ ಅವಧಿಗೆ ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿಶೇಷ "ಅಪಾಯ ಭತ್ಯೆ" ಘೋಷಿಸಬೇಕು. ಜೊತೆಗೆ ಅವರಿಗೆ ಎಲ್ಲಾ ಅಗತ್ಯ ವಸ್ತುಗಳನ್ನು ನೀಡಬೇಕು ಎಂದು ಪ್ರಧಾನಿಗೆ ಮನವಿ ಮಾಡಿದರು.
ಅನೇಕ ವ್ಯವಹಾರಗಳು ಮತ್ತು ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಲಿವೆ ಎಂಬ ವರದಿಗಳು ಹರಿದಾಡುತ್ತಿವೆ. ಕೇಂದ್ರ ಸರ್ಕಾರವು ತಕ್ಷಣವೇ ನೇರ ನಗದು ಸೇರಿದಂತೆ ಸಾಮಾಜಿಕ ಸಂರಕ್ಷಣಾ ಕ್ರಮಗಳನ್ನು ಜಾರಿಗೆ ತರಬೇಕು. ಕಷ್ಟದ ಸಂದರ್ಭದಲ್ಲಿ ಉದ್ಯೋಗ ಖಾತರಿ (ಎಂಜಿಎನ್‌ಆರ್‌ಇಜಿಎ) ಕಾರ್ಮಿಕರು, ರೈತರು, ಮೀನುಗಾರರು, ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ಇತರರಿಗೆ ನೇರ ನಗದು ವರ್ಗಾವಣೆ ಮಾಡಬೇಕಿದೆ ಎಂದರು.
ಕಾಂಗ್ರೆಸ್ ಪ್ರಸ್ತಾಪಿಸಿರುವ ಕನಿಷ್ಠ ಆದಾಯ ಖಾತರಿ ಯೋಜನೆಯನ್ನು ಜಾರಿಗೆ ತರುವುದು ಇದು ಸರಿಯಾದ ಸಮಯವಾಗಿದೆ. ಈ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಪ್ರಮುಖ ಆರ್ಥಿಕ ಕುಸಿತವು ಬಡವರಿಗೆ ಅಪಾರ ಸಂಕಟ ತಂದೊಡ್ಡಲಿದೆ. ಅವರಿಗೆ ಕೆಲವು ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಬೇಕು. ಪ್ರತಿ 'ಜನ ಧನ್' ಖಾತೆದಾರರಿಗೆ, 'ಪಿ.ಎಂ. ಕಿಸಾನ್ ಯೋಜನೆ' ಖಾತೆದಾರರಿಗೆ, ಎಲ್ಲಾ ವೃದ್ಧಾಪ್ಯ/ ವಿಧವೆ/ ವಿಭಿನ್ನ ಸಾಮರ್ಥ್ಯದ ವ್ಯಕ್ತಿಯ ಪಿಂಚಣಿ ಖಾತೆ ಹಾಗೂ ಎಂಜಿಎನ್‌ಆರ್‌ಇಜಿಎ ಕಾರ್ಮಿಕರ ಖಾತೆಗೆ 7,500 ರೂ. ನೀಡಬೇಕು. 21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಒಂದು ಬಾರಿ ವಿಶೇಷ ಕ್ರಮವಾಗಿ ಪಿಡಿಎಸ್ ಮೂಲಕ ಪ್ರತಿ ಪಡಿತರ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ ಮತ್ತು ಗೋಧಿಯನ್ನು ಉಚಿತವಾಗಿ ನೀಡಬೇಕು ಎಂದು ಸೋನಿಯಾ ಪತ್ರದಲ್ಲಿ ಮನವಿ ಮಾಡಿದರು.
ಅಗತ್ಯ ತೆರಿಗೆ ವಿನಾಯಿತಿ, ಬಡ್ಡಿ ಮನ್ನಾ ಮತ್ತು ಸಾಲದ ಹೊಣೆಗಾರಿಕೆಗಳ ಮುಂದೂಡಿಕೆ ಸೇರಿದಂತೆ ಸಮಗ್ರ ವಲಯವಾರು ಪರಿಹಾರ ಪ್ಯಾಕೇಜ್ ಘೋಷಿಸಲು ಕೇಂದ್ರ ನೀರ್ಧರಿಸಬೇಕು. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಜನರೊಂದಿಗೆ ನಿಂತು ಸರ್ಕಾರಕ್ಕೆ ಸಂಪೂರ್ಣವಾದ ಬೆಂಬ ನೀಡಲಿದೆ ಎಂದು ಹೇಳಿದ್ದಾರೆ.