ನವದೆಹಲಿ: ತನ್ನ ತಂದೆಯೇ ತನ್ನ ಹೆಂಡತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಮಗನೊಬ್ಬ ಕತ್ತಿಯಿಂದ ಇರಿದು, ಬಟ್ಟೆಯಿಂದ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಅಪ್ಪನನ್ನು ಭೀಕರವಾಗಿ ಕೊಂದಿರುವ ಘಟನೆ ನಡೆದಿದೆ.
ದೀಪಾವಳಿಯಂದು, ದೆಹಲಿಯ ದ್ವಾರಕಾ ಜಿಲ್ಲೆಯ ಓಂ ವಿಹಾರ್ 5 ನೇ ಹಂತದ ಉತ್ತಮ್ ನಗರದಲ್ಲಿ ಮಗ , ತನ್ನ 60 ವರ್ಷದ ತಂದೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ತಂದೆಯು ಸೊಸೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಗುಮಾನಿ ಹೊಂದಿದ್ದ ಮಗ, ಈ ವಿಚಾರವಾಗಿ ತಂದೆ ಜೊತೆ ಆಗಾಗ ಜಗಳ ಮಾಡುತ್ತಿದ್ದ. ಈ ಸಂಬಂಧದ ಬಗೆಗಿನ ಅನುಮಾನ ಮತ್ತು ಜಗಳ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಪೊಲೀಸರ ಪ್ರಕಾರ, ಮೃತನ ಹಿರಿಯ ಮಗ ಅವಧೇಶನ ಪತ್ನಿಯೊಂದಿಗೆ ಮೃತ ತಂದೆಯು ಅಕ್ರಮ ಸಂಬಂಧ ಹೊಂದಿದ್ದಾನೆಂಬ ಶಂಕೆಯಿಂದ ಅವಧೇಶ್, ಈ ಬಗ್ಗೆ ತಂದೆ ಜೊತೆ ಆಗಾಗ್ಗೆ ಜಗಳ ಮಾಡುತ್ತಿದ್ದ. ದೀಪಾವಳಿ ಹಿನ್ನೆಲೆ ಹೆಂಡತಿಯನ್ನು ಊರಿಗೆ ಕಳಿಸಿದ್ದ. ಮೃತನ ಕಿರಿಯ ಮಗ ದೀಪಾವಳಿಯ ದಿನ ಹೊರಗೆ ಹೋಗಿದ್ದ ಈ ವೇಳೆ ಪುನಃ ಅವಧೇಶ ಮತ್ತು ಆತನ ತಂದೆ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ತಂದೆಯನ್ನೇ ಆತ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬಂದ ಕಿರಿಯ ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯ ದೇಹವನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿ ಮಗನನ್ನು ಬಂಧಿಸಿ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.