ನವದೆಹಲಿ: ದೇಶದ ಅತಿದೊಡ್ಡ ಉಕ್ಕು ತಯಾರಿಕೆ ಕಂಪನಿಯಾದ ಭಾರತೀಯ ಉಕ್ಕು ಪ್ರಾಧಿಕಾರದ (SAIL) ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಸೋಮ ಮೊಂಡಾಲ್ ಪಾತ್ರರಾಗಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಸೋಮ ಮೊಂಡಾಲ್, ಭಾರತೀಯ ಉಕ್ಕು ಪ್ರಾಧಿಕಾರ ತನ್ನದೇ ಆದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಜೊತೆಗೆ ರಾಷ್ಟ್ರ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದೆ. ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುವ ಮೂಲಕ ಕಂಪನಿಯನ್ನು ಇನ್ನೂ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗೋಣ ಎಂದರು.
ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರೆಯಾದ ಮೊಂಡಾಲ್ ಅವರು, ಸೈಲ್ನ ವಾಣಿಜ್ಯ ವಿಭಾಗದ ನಿರ್ದೇಶಕರಾಗಿ ಕೂಡ ಈ ಮೊದಲು ಕಾರ್ಯನಿರ್ವಹಿಸಿದ್ದಾರೆ. 2017ರಲ್ಲಿ ಸೈಲ್‌ಗೆ ವಾಣಿಜ್ಯ ವಿಭಾಗದ ನಿರ್ದೇಶಕರಾಗಿ ಸೇರಿದರು. ಜೂನಿಯರ್ ಮ್ಯಾನೇಜರ್ ಮತ್ತು ಡೈರೆಕ್ಟರ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ ನಂತರ ಅನಿಲ್ ಕುಮಾರ್ ಚೌಧರಿ ಅವರಿಂದ ತೆರವಾದ ಸೈಲ್ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.