ಡೆಹ್ರಾಡೂನ್(ಉತ್ತರಾಖಂಡ್): ಉತ್ತರ ರಾಜ್ಯಗಳಲ್ಲಿ ಈಗಾಗಲೇ ಚಳಿಯ ಪ್ರಮಾಣ ಹೆಚ್ಚಿದೆ. ಉತ್ತರಾಖಂಡ್ನಲ್ಲಿರುವ ದೇಶದ ಕಟ್ಟಕಡೆಯ ಹಳ್ಳಿಯಲ್ಲಿ ನೀರೆಲ್ಲ ಮಂಜುಗಡ್ಡೆಯಾಗಿ ಮಾರ್ಪಟ್ಟಿದೆ.
ಚಮೋಲಿ ಜಿಲ್ಲೆ ಶೀತದ ಪ್ರಮಾಣ ಹೆಚ್ಚಾಗಿದ್ದು, ಭಾರಿ ಪ್ರಮಾಣದ ಹಿಮಪಾತದಿಂದ ಬೆಟ್ಟ ಗುಡ್ಡಗಳೆಲ್ಲ ಶ್ವೇತ ವರ್ಣದಿಂದ ಕಂಗೊಳಿಸುತ್ತಿವೆ. ಹಿಮಪಾತದಿಂದಾಗಿ ತಾಪಮಾನವು ಮೈನಸ್ 10 ಡಿಗ್ರಿ ತಲುಪಿದೆ. ಚಮೋಲಿ ಮತ್ತು ಮನದಲ್ಲಿ ನೀರು ಹೆಪ್ಪುಗಟ್ಟುತ್ತಿದೆ. ಮುಂದಿನ ದಿನಗಳಲ್ಲಿ ಹಿಮಪಾತದ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.
ಒಂದೆಡೆ ಪ್ರಕೃತಿ ತನ್ನ ಸೌಂದರ್ಯವನ್ನ ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಅದರ ಕರಾಳತೆಗೆ ಗ್ರಾಮದ ಜನರು ಊರು ಬಿಡುವ ಪರಿಸ್ಥಿಸಿ ಎದುರಾಗಿದೆ. ನೀರೆಲ್ಲ ಹೆಪ್ಪುಗಟ್ಟುತ್ತಿರುವ ಕಾರಣ ಗುಡ್ಡಗಾಡಿನಲ್ಲಿ ವಾಸಿಸುತ್ತಿರುವ ಜನರು ತಮ್ಮ ಮನೆಗಳನ್ನ ತೊರೆದು ಬೇರೆಡೆಗೆ ತೆರಳುತ್ತಿದ್ದಾರೆ. ಉತ್ತರಾಖಂಡ್ನಲ್ಲಿರುವ ಭಾರತದ ಕಟ್ಟ ಕಡೆಯ ಹಳ್ಳಿ ನೀತಿ ಮಾಣಾ ಕೂಡ ಹಿಮದಿಂದ ಆವೃತವಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಉತ್ತರ ಪ್ರದೇಶ, ಚಮೋಲಿ, ರುದ್ರಪ್ರಯಾಗ್, ಬಾಗೇಶ್ವರ ಜಿಲ್ಲೆಗಳಲ್ಲಿ ಅಲ್ಪ ಮಳೆ ಮತ್ತು ಹಿಮಪಾತವಾಗುವ ಸಂಭವವಿದೆ. ಅಷ್ಟೇ ಅಲ್ಲದೆ 3,000 ಮೀಟರ್‌ಗಿಂತ ಹೆಚ್ಚು ಎತ್ತರವಿರುವ ಪ್ರದೇಶಗಳಲ್ಲಿ ಹಿಮಪಾತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.