ಔರಂಗಾಬಾದ್ (ಬಿಹಾರ): ಬಿಹಾರದ ಔರಂಗಾಬಾದ್ ಜಿಲ್ಲೆಯ ಕುತುಂಬಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವಾಗ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಮೇಲೆ ಚಪ್ಪಲಿ ಎಸೆದಿದ್ದಾರೆ.
ಪಕ್ಷದ ಕಾರ್ಯಕರ್ತರ ಘೋಷಣೆಗಳ ಮಧ್ಯೆ ವೇದಿಕೆ ಆಗಮಿಸದ ಕೂಡಲೇ ತೇಜಸ್ವಿ ಯಾದವ್ ಅವರ ಮೇಲೆ ಚಪ್ಪಲಿ ಎಸೆಯಲಾಗಿದೆ. ಮೊದಲು ಬೀಸಿದ ಚಪ್ಪಲಿ ಅವರ ಪಕ್ಕದಲ್ಲೇ ಹೋಗಿ ಬೇರೊಬ್ಬರ ಮೇಲೆ ಬಿದ್ದಿದೆ. ಆದರೆ, ನಂತರದಲ್ಲೆ ತೂರಿದ ಮತ್ತೊಂದು ಚಪ್ಪಲಿ ನೇರವಾಗಿ ಬಂದು ತೇಜಸ್ವಿ ಅವರ ಮಡಿಲಿಗೆ ಬಿದ್ದಿದೆ.
ಟ್ರೈಸಿಕಲ್ ಮೇಲೆ ಕುಳಿತಿದ್ದ ವಿಶೇಷ ಚೇತನ ವ್ಯಕ್ತಿಯೋರ್ವ ತೇಜಸ್ವಿ ಯಾದವ್ ಮೇಲೆ ಚಪ್ಪಲಿ ಎಸೆದಿದ್ದಾನೆ ಎನ್ನಲಾಗಿದೆ. ಜನರು ಮತ್ತು ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಸಭೆಯಿಂದ ಕರೆದೊಯ್ದರು ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ತಲೆ ಕೆಡಿಸಿಕೊಳ್ಳದ ತೇಜಸ್ವಿ ಯಾದವ್, ತಮ್ಮ ಭಾಷಣದಲ್ಲಿ ಕೂಡ ಅದನ್ನು ಉಲ್ಲೇಖಿಸಲಿಲ್ಲ. ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಈ ಘಟನೆಯನ್ನು ಖಂಡಿಸಿದ್ದು, ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ನಾಯಕರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.