ನವದೆಹಲಿ: ದೇಶದಲ್ಲಿ ಹೆಚ್1ಎನ್1 ವೈರಸ್ ಎಲ್ಲೆಡೆ ತನ್ನ ಕಬಂದ ಬಾಹು ಚಾಚುತ್ತಿದೆ. ರಾಷ್ಟ್ರ ದೆಹಲಿಯಲ್ಲಿ ಹಂದಿ ಜ್ವರದ ಭೀತಿ ಹೆಚ್ಚಾಗುತ್ತಿದೆ. ನವದೆಹಲಿಯಲ್ಲಿ ಸುಮಾರು 164 ಹಂದಿ ಜ್ವರ ಪ್ರಕರಣಗಳು ದಾಖಲಾಗಿವೆ ಎಂದು ಫೆ.22 ರಂದು ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ ವರದಿ ಬಿಡುಗಡೆ ಮಾಡಿತ್ತು.
ಸುಪ್ರೀಂಕೋರ್ಟ್‌ನ ಆರು ನ್ಯಾಯಮೂರ್ತಿಗಳು ಹೆಚ್1ಎನ್1 ವೈರಸ್ನಿಂದ ಬಳಲುತ್ತಿದ್ದು, ಅವರುಗಳು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಮಂಗಳವಾರ ತಿಳಿಸಿದ್ದಾರೆ.
ಎಚ್1ಎನ್1 ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಅವರೊಂದಿಗೆ ಸುಪ್ರೀಂಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು ಸಭೆ ನಡೆಸಿದ್ದಾರೆ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ವಕೀಲರಿಗೆ ಹೆಚ್1ಎನ್1 ವೈರಸ್ ನಿಯಂತ್ರಣ ಲಸಿಕೆಗಳನ್ನು ನೀಡುವಂತೆ ನಿರ್ಧರಿಸಲಾಗಿದೆ. ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಹಂದಿಜ್ವರವನ್ನು ತಡೆಯಲು ವಕೀಲರು ಮತ್ತು ಬಾರ್ ಅಸೋಸಿಯೇಷನ್ ಮುಖ್ಯಸ್ಥರು ಸಹ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಗಳ ಸಭೆಯಲ್ಲಿ ಸೂಚಿಸಲಾಗಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಮಾಹಿತಿ ನೀಡಿದರು.
ಅದೇ ರೀತಿ, ಹೆಚ್1ಎನ್1 ರೋಗದ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ದುಶ್ಯಂತ್ ಡೇವ್ ಅವರೊಂದಿಗೂ ಸಭೆ ನಡೆಸಲಾಯಿತು. ಸಭೆ ನಂತರ ಮಾತನಾಡಿದ ದುಶ್ಯಂತ್ ಡೇವ್, ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ನಡೆದ ನ್ಯಾಯಾಂಗ ಸಮಾವೇಶದಲ್ಲಿ ಭಾಗವಹಿಸಿದ್ದ ಕೆಲವು ವಿದೇಶಿ ನಿಯೋಗದ ಸದಸ್ಯರುಗಳಲ್ಲಿ ಹೆಚ್1ಎನ್1 ವೈರಸ್ ಸೋಂಕಿಗೆ ಒಳಗಾಗಿದ್ದರು, ಇದರಿಂದಾಗಿಯೂ ನ್ಯಾಯಧೀಶರಲ್ಲಿ ಹೆಚ್1ಎನ್1 ವೈರಸ್ ಹರಡುತ್ತಿರುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಒಟ್ಟಾರೆ, ಹೆಚ್1ಎನ್1 ವೈರಸ್ ದೇಶದೆಲ್ಲೆಡೆ ಹರಡುತ್ತಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನೂ ಬಿಡದೆ ಆವರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾಯ ವಿಚಾರಣೆಗೆ ಮುಸುಕು ಧರಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.