ಹೈದರಾಬಾದ್ (ತೆಲಂಗಾಣ): ಇಲ್ಲಿನ ನಿಜಾಮಾಬಾದ್ ಜಿಲ್ಲೆಯಲ್ಲಿ ಹಣ ನೀಡುವ ನೆಪದಲ್ಲಿ 26 ವರ್ಷದ ಯುವತಿಯೊಬ್ಬಳ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಆರು ಮಂದಿ ಅತ್ಯಾಚಾರ ಎಸಗಿದ್ದಾರೆ.
ಯುವತಿಯು ತನ್ನ ಸಹೋದರಿಯ ಚಿಕಿತ್ಸೆಗಾಗಿ ನಿಜಾಮಾಬಾದ್ಗೆ ಬಂದಿದ್ದಳು. ಹಣ ಹೊಂದಿಸುವ ತೊಳಲಾಟದಲ್ಲಿದ್ದ ಯುವತಿಗೆ ಆ. 24 ರ ಮಧ್ಯರಾತ್ರಿ ಯಾರೋ ಕೆಲವರು ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಅವರು ಕರೆದ ಸ್ಥಳಕ್ಕೆ ತೆರಳಿದ್ದಳು. ಏಕಾಂತ ಪ್ರದೇಶಕ್ಕೆ ಕರೆದೊಯ್ದ ದುರುಳರು ಇಬ್ಬರು ಅಪ್ರಾಪ್ತರು ಸೇರಿದಂತೆ ಆರು ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ 1.30ರ ಸುಮಾರಿಗೆ ಪೊಲೀಸರ ಗಸ್ತು ತಂಡವೊಂದು ಆ ಗುಂಪನ್ನು ಗುರುತಿಸಿ ತಮ್ಮ ವಾಹನವನ್ನು ನಿಲ್ಲಿಸಿದ್ದರು. ಈ ವೇಳೆ ಪೊಲೀಸರನ್ನು ನೋಡಿದ ದುರುಳರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಯುವತಿಯು ನಡೆದ ಘಟನೆಯನ್ನು ವಿವರಿಸಿದ್ದು ಈ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಸದ್ಯ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರನ್ನು ಬಂಧಿಸಿದರೆ, ಇಬ್ಬರು ಅಪ್ರಾಪ್ತ ಬಾಲಕರನ್ನು ಬಾಲಾಪರಾಧಿ ಸೆಲ್ಗೆ ಕಳುಹಿಸಲಾಗಿದೆ.