ಧನಾಬಾದ್ (ಜಾರ್ಖಂಡ್): ಕೊರೊನಾ ಮಹಾಮಾರಿ ಜಾರ್ಖಂಡ್ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಇಲ್ಲಿನ ಧನಾಬಾದ್ನಲ್ಲಿ ತಾಯಿ ಸೇರಿದಂತೆ ಒಂದೇ ಕುಟುಂಬದ 6 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು, ಮತ್ತೊಬ್ಬ ಸೋಂಕಿತನ ಸ್ಥಿತಿ ಗಂಭೀರವಾಗಿದೆ.
ಧನಾಬಾದ್ ಪ್ರದೇಶದ ಕತ್ರಾ ಪ್ರದೇಶದಲ್ಲಿ ರಾಣಿ ಬಜಾರ್ನಲ್ಲಿ ಕೆಲವು ದಿನಗಳ ಹಿಂದೆ ಕುಟುಂಬದ ಸದಸ್ಯರಿಗೆ ಕೊರೊನಾ ಮಹಾಮಾರಿ ಕಾಣಿಸಿಕೊಂಡಿತ್ತು. ಅವರನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಜುಲೈ 4ರಂದು ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯೊಬ್ಬರು ಮೃತಪಟ್ಟಿದ್ದರು.
ನಂತರದ 15 ದಿನಗಳಲ್ಲಿ ಆಕೆಯ ಐದೂ ಮಂದಿ ಮಕ್ಕಳು ಸೋಂಕಿಗೆ ಬಲಿಯಾಗಿದ್ದಾರೆ. ಅದೇ ಕುಟುಂಬದ ಮತ್ತೋರ್ವ ಸೋಂಕಿತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ಪ್ರಕರಣ ದೇಶದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದ್ದು, ಮೊದಲು ಮೃತಪಟ್ಟ ಮಹಿಳೆ ದೆಹಲಿಯಲ್ಲಿ ವಿವಾಹವೊಂದರಲ್ಲಿ ಪಾಲ್ಗೊಂಡಿದ್ದ ಕಾರಣ ಸೋಂಕು ಪತ್ತೆಯಾಗಿತ್ತು. ಕುಟುಂಬದ ಉಳಿದವರಿಗೂ ಕೂಡಾ ಹರಡಿತ್ತು ಎನ್ನಲಾಗಿದೆ.