ತಿರುವನಂತಪುರಂ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಖಾಸಗಿ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ವರದಿಗಳ ಪ್ರಕಾರ, ಶಿವಶಂಕರ್ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಮಿರ್ ಮೊಹಮ್ಮದ್ ಅವರನ್ನು ಮುಖ್ಯಮಂತ್ರಿ ಕಚೇರಿಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಈ ಮಧ್ಯೆ ಶಿವಶಂಕರ್ ಅವರು ಕೇರಳ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದು, ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿದ ನಂತರ ದೀರ್ಘ ಕಾಲದ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ.
ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜೂನ್ 5ರಂದು ಸರಕು ಸಾಗಣೆ ವಿಮಾನದಲ್ಲಿ ತರಲಾಗಿದ್ದ 30 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಈ ಪಾರ್ಸಲ್ ದುಬೈನಿಂದ ಬಂದಿದ್ದು, ಯುಎಇ ರಾಯಭಾರ ಕಚೇರಿ ಹೆಸರಿಗೆ ಬಂದಿದೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಕಳ್ಳಸಾಗಣೆಯ ಆರೋಪಿ ಸರಿತ್ ಯುಎಇ ಕಾನ್ಸುಲೇಟ್‌ನ ಮಾಜಿ ಸಿಬ್ಬಂದಿಯಾಗಿದ್ದು, ಅವರ ಈ ಅಕ್ರಮ ಅಕ್ರಮ ಕೆಲಸಗಳಿಗೆ ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಲಿಮಿಟೆಡ್ (ಕೆಎಸ್‌ಐಟಿಐಎಲ್)ನ ಸಿಬ್ಬಂದಿಯಾಗಿದ್ದ ಸ್ವಪ್ನಾ ಸುರೇಶ್ ಅವರ ಕುಮ್ಮಕ್ಕು ಇತ್ತು ಎನ್ನಲಾಗಿದೆ. ಸೋಮವಾರದವರೆಗೆ ಸರಿತ್ ಅವರನ್ನು ಪ್ರಶ್ನಿಸಿದಾಗ ಈ ಪ್ರಕರಣದಲ್ಲಿ ಆಕೆಯ ಪಾಲ್ಗೊಳ್ಳುವಿಕೆ ಇರುವುದು ಬಹಿರಂಗವಾಗಿದೆ. ಕಸ್ಟಮ್ಸ್ ಇಲಾಖೆಯ ಪ್ರಕಾರ ಸ್ವಪ್ನಾ ಸುರೇಶ್ ಪರಾರಿಯಾಗಿದ್ದಾರೆ. ತನಿಖಾ ತಂಡ ಆಕೆಯನ್ನು ಹುಡುಕುತ್ತಿದೆ ಎನ್ನಲಾಗಿದೆ.