ನವದೆಹಲಿ: ಬಜೆಟ್ ಮಂಡನೆ ಬಳಿಕ ವಿಶೇಷ ಸಂವಾದವೊಂದರಲ್ಲಿ ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಬಜೆಟ್ ಸಕಾರಾತ್ಮಕವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇಂದಿನ ಬಜೆಟ್ ಕಾರ್ಪೋರೇಟ್ ವಲಯದ ಮೇಲೆ ಪ್ರೋತ್ಸಾಹದಾಯಕ ಪರಿಣಾಮ ಬೀರದ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಪೋರೇಟ್ ವಲಯದ ಮೇಲೆ ಬಜೆಟ್ ಅಂಶಗಳ ನೈಜ ಪರಿಣಾಮವನ್ನು ಅರಿಯಲು ನಾವು ಸೋಮವಾರದಂತಹ ಸಾಮಾನ್ಯ ವಹಿವಾಟಿನ ದಿನಕ್ಕೆ ಕಾಯಬೇಕಾಗಿದೆ ಎಂದಿದ್ದಾರೆ. ಇಂದು ಶನಿವಾರವಾಗಿದ್ದು, ವ್ಯಾಪಾರೇತರ ದಿನವಾಗಿದ್ದರೂ ಷೇರು ವಿನಿಮಯ ಕೇಂದ್ರಗಳು ಇಂದು ವ್ಯಾಪಾರಕ್ಕಾಗಿ ಮುಕ್ತವಾಗಿದ್ದವು. ಆದಾಗ್ಯೂ ಇಂದು ಖರೀದಿಸಿದ ಷೇರುಗಳು ವ್ಯಾಪಾರ ವಹಿವಾಟಿನ ಮುಂದಿನ ದಿನ ಉತ್ತಮ ಮೌಲ್ಯ ಪಡೆದುಕೊಳ್ಳಬಹುದು ಎಂದಿದ್ದಾರೆ.
ನಿರ್ಮಲಾ ಸೀತಾರಾಮನ್ ಇಂದು ತಮ್ಮ ಬಜೆಟ್ನಲ್ಲಿ ತೆರಿಗೆ ದರಗಳನ್ನು ಇಳಿಸಿ, ತೆರಿಗೆ ಸ್ಲ್ಯಾಬ್‌ಗಳನ್ನು ಐದು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಈ ನಡುವೆ ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಸೆನ್ಸೆಕ್ಸ್ 987 ಪಾಯಿಂಟ್ ಮತ್ತು ನಿಫ್ಟಿ 300 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ.
ಪ್ರಸ್ತಾವಿತ ತೆರಿಗೆಯಲ್ಲಿ ಗ್ರಾಹಕರ ಕೈಯಲ್ಲಿ ಹೆಚ್ಚಿನ ಆದಾಯ ಉಳಿದು, ಜನರ ಬಳಕೆಯ ಬೇಡಿಕೆ ಹೆಚ್ಚಿಸಬಹುದು. ಮುಂದಿನ ಹಣಕಾಸು ವರ್ಷದಲ್ಲಿ ಪ್ರಸ್ತಾವಿತ ಬೆಳವಣಿಗೆಯನ್ನು ಶೇ. 10ಕ್ಕೆ ಏರಿಸುವ ವಿಶ್ವಾಸವಿದೆ. ಹಾಗೆಯೇ ಹಣಕಾಸಿನ ಕೊರತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 3.8 ಹಾಗೂ ಮುಂದಿನ ಹಣಕಾಸು ವರ್ಷದಲ್ಲಿ ಶೇ. 3.5ಕ್ಕೆ ಇಳಿಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಎಸ್‌ಟಿಟಿ, ಸಿಸಿಟಿ ಮತ್ತು ಎಲ್‌ಟಿಸಿಜಿಯಲ್ಲಿ ವಿನಾಯ್ತಿಗಳನ್ನು ನಿರೀಕ್ಷಿಸಿದ್ದ ಕಾರ್ಪೋರೇಟ್ ವಲಯಕ್ಕೆ ಇಂದಿನ ಬಜೆಟ್ ನಿರಾಸೆ ಮೂಡಿಸಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್, ಕಾರ್ಪೋರೇಟ್ ಬಾಂಡ್‌ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಪಿಐ)ಯ ಮಿತಿಯನ್ನು ಶೇ. 9ರಿಂದ 15ಕ್ಕೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ವಿದೇಶಿ ಹೂಡಿಕೆದಾರರಿಗೆ ಸರ್ಕಾರದಿಂದ ಭದ್ರತೆ ನೀಡುವ ಬಗ್ಗೆಯೂ ಗಮನ ಹರಿಸಲಾಗಿದೆ ಎಂದಿದ್ದಾರೆ.