ಮುಂಬೈ: ದೇಶದಲ್ಲಿ ಹರಡುತ್ತಿರುವ ಹಕ್ಕಿ ಜ್ವರದ ಹಿಂದೆ ಕೂಡ ಪಾಕಿಸ್ತಾನ, ಖಲಿಸ್ತಾನ ಹಾಗೂ ನಕ್ಸಲರ ಕೈವಾಡವಿದೆಯೇ ಎಂದು ಬಿಜೆಪಿಗೆ ಶಿವಸೇನೆ ಪ್ರಶ್ನಿಸಿದೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಹಿಂದೆ ಪಾಕಿಸ್ತಾನ, ಖಲಿಸ್ತಾನ, ಚೀನಾ ಹಾಗೂ ಮಾವೋವಾದಿಗಳ ಕುತಂತ್ರವಿದೆ ಎಂದು ಈ ಹಿಂದೆ ಬಿಜೆಪಿ ನಾಯಕರು ಆರೋಪಿಸಿದ್ದರು. ಇದಕ್ಕೆ ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಹೀಗೆ ಟಾಂಗ್ ನೀಡಿದೆ.
ಹಕ್ಕಿ ಜ್ವರದಿಂದಾಗಿ ರೈತರು ಮತ್ತು ಕೋಳಿ ಸಾಕಣೆ ಕೇಂದ್ರಗಳನ್ನು ನಡೆಸುತ್ತಿರುವವರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈಗಾಗಲೇ ಕೃಷಿ ಕಾನೂನುಗಳಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಇನ್ನು ಹಕ್ಕಿ ಜ್ವರದಿಂದಾಗಿ ಕೋಳಿಗಳು ಹಾಗೂ ಮೊಟ್ಟೆಗಳ ವ್ಯಾಪಾರ ಆಗುವುದಿಲ್ಲ. ಕೋಳಿ ಕೃಷಿಯಲ್ಲಿ ತೊಡಗಿರುವ ರೈತರನ್ನು ಯಾರು ಬೆಂಬಲಿಸುತ್ತಾರೆ? ಎಂದು ಸಾಮ್ನಾನಲ್ಲಿ ಪ್ರಶ್ನಿಸಲಾಗಿದೆ.
ಇದನ್ನೂ ಓದಿ - ದೇಶದಲ್ಲಿ ಹಕ್ಕಿ ಜ್ವರ ಹರಡಲು ಪ್ರತಿಭಟನಾನಿರತ ರೈತರೇ ಕಾರಣ : ಬಿಜೆಪಿ ಶಾಸಕ
ಮೊನ್ನೆಯಷ್ಟೇ ರಾಜಸ್ಥಾನದ ಬಿಜೆಪಿ ಶಾಸಕ ಮದನ್ ದಿಲಾವರ್ ಪ್ರತಿಭಟನಾನಿರತ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರತಿಭಟನಾಕಾರರು ಚಿಕನ್ ಬಿರಿಯಾನಿ ತಿನ್ನುತ್ತ ಆನಂದಿಸುತ್ತಿದ್ದಾರೆ. ಇದು ರೋಗವನ್ನು ಹರಡುವ ಪಿತೂರಿಯಾಗಿದ್ದು, ದೇಶದಲ್ಲಿ ಹಕ್ಕಿ ಜ್ವರ ಹರಡಲು ಇವರೇ ಕಾರಣ ಎಂದು ಹೇಳಿದ್ದರು.