ಇತಿಹಾಸದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ವೇಳೆ ವಿನೋದ್ ದೀಕ್ಷಿತ್‌ರನ್ನ ಮೊದಲ ಬಾರಿ ನೋಡಿ ಫಿದಾ ಆಗಿದ್ದರಂತೆ ಶೀಲಾ ದೀಕ್ಷಿತ್. ಆದ್ರೆ ವಿನೋದ್ ಪರಿಚಯ ಅವರಿಗಿಲ್ಲ. ಆದ್ರೆ ಅವರ ಸ್ನೇಹಿತೆಯ ಪ್ರಿಯಕರನ ಗೆಳೆಯ ವಿನೋದ್ ಆಗಿದ್ದರು. ಶೀಲಾ ಸ್ನೇಹಿತೆ ಹಾಗೂ ವಿನೋದ್ ಅವರ ಸ್ನೇಹಿತ ಪರಸ್ಪರ ಪ್ರೇಮದಲ್ಲಿದ್ದರು. ಇವರ ಜಗಳ ಸರಿಪಡಿಸಲು ವಿನೋದ್ ಹಾಗೂ ಶೀಲಾ ಮುಂದಾದರು. ಆದ್ರೆ, ಅವರ ನಡುವಿನ ವೈಮನಸ್ಯ ಮಾತ್ರ ಸರಿಯಾಗಲಿಲ್ಲ. ಆದ್ರೆ, ನಮ್ಮ ಸ್ನೇಹ ಆರಂಭವಾಯಿತು ಎಂದು ಶೀಲಾ ದಿಕ್ಷಿತ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಆ ಘಟನೆಯ ಬಳಿಕ ನಾವು ಜತೆಯಲ್ಲೇ ಓಡಾಡುತ್ತಿದ್ದೆವು. ಪರಸ್ಪರ ಉತ್ತಮ ಸ್ನೇಹಿತರಾಗಿದ್ದೆವು. ಎಂಎ ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ನಾನು ಹತ್ತಿದ ಬಸ್ಸನ್ನೇ ವಿನೋದ್ ಹತ್ತಿ ಪಕ್ಕದಲ್ಲಿ ಕುಳಿತುಕೊಂಡರು. ಆಗ ಅವರು, ನಾನು ಮದುವೆಯಾಗುವ ಹುಡುಗಿ ಸಿಕ್ಕಿದ್ದಾಳೆಂದು ನನ್ನ ತಾಯಿ ಬಳಿ ಹೇಳಿದ್ದೆ. ಅದಕ್ಕೆ ನನ್ನ ತಾಯಿ, ನಾನು ಆ ಹುಡುಗಿ ಅಭಿಪ್ರಾಯ ಕೇಳಿದ್ದೀಯಾ? ಅಂತಾ ಪ್ರಶ್ನಿಸಿದ್ದರು. ಇಲ್ಲ,ಆದ್ರೆ ಆ ಹುಡುಗಿ ನನ್ನ ಪಕ್ಕದಲ್ಲೇ ಕುಳಿತುಕೊಂಡಿದ್ದಾಳೆ ಎಂದು ವಿನೋದ್ ಹೇಳಿದಾಗ ಒಂದು ಕಡೆ ಅಳು, ಮತ್ತೊಂದು ಕಡೆ ಸಂತಸದಿಂದ ಆತನನ್ನು ಗಟ್ಟಿಯಾಗಿ ಅಪ್ಪಿಕೊಂಡೆ ಎಂದು ಶೀಲಾ ದೀಕ್ಷಿತ್ ಹೇಳುತ್ತಾರೆ.
ಇಬ್ಬರ ಸಂಬಂಧವನ್ನು ಮನೆಯಲ್ಲಿ ಒಪ್ಪಿಕೊಳ್ಳಲು ಎರಡು ವರ್ಷವೇ ಬೇಕಾಯಿತು. ವಿನೋದ್ ಐಎಎಸ್ ಪರೀಕ್ಷೆಗೆ ಸಿದ್ಧವಾಗುತ್ತಿದ್ದರು. ಹೀಗಾಗಿ ನಮ್ಮ ನಡುವೆ ತುಂಬಾ ದಿನಗಳ ಕಾಲ ಮಾತುಕತೆಗಳೇ ಇರಲಿಲ್ಲ. ಬಳಿಕ ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ವಿನೋದ್ ಐಎಎಸ್ 9ನೇ ಟಾಪರ್ ಆಗಿ ಹೊರಹೊಮ್ಮಿದ್ರು. ಇದರಿಂದಾಗಿ ನಮ್ಮ ಮನೆಯಲ್ಲಿ ಲವ್ ಮ್ಯಾರೇಜ್ಗೆ ಗ್ರೀನ್ ಸಿಗ್ನಲ್ ದೊರೆಯಿತು.
ವಿನೋದ್ ತಂದೆ ಉಮಾಶಂಕರ್ ದೀಕ್ಷಿತ್ ಸ್ವಾತಂತ್ರ್ಯ ಹೋರಾಟಗಾರರು. ನೆಹರೂ ಅವರ ಆಪ್ತರೂ ಆಗಿದ್ದರು. ವಿನೋದ್ ತಮ್ಮನ್ನು ಕುಟುಂಬವನ್ನು ಭೇಟಿ ಮಾಡಲು ಕರೆದುಕೊಂಡು ಹೋಗಿದ್ದರು. ಆಗ ತುಂಬಾ ಭಯಪಟ್ಟಿದ್ದೆ. ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಕೊನೆಯಲ್ಲಿ ನನ್ನನ್ನು ಮೆಚ್ಚಿದ್ದರು ಎಂದು ಶೀಲಾ ದೀಕ್ಷಿತ್ ಹೇಳಿಕೊಂಡಿದ್ದರು. ವಿನೋದ್ ತಾಯಿಯವರು ನಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಡಲು ತುಂಬಾನೇ ಸಮಯ ತೆಗೆದುಕೊಂಡರು. ಬಳಿಕ 1962 ಜುಲೈ 11ರಂದು ಆಡಂಬರ ಮದುವೆಯಲ್ಲದಿದ್ದರೂ ಸಾಧಾರಣವಾಗಿಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದು ಶೀಲಾ ದೀಕ್ಷಿತ್ ತಮ್ಮ ಲವ್ ಮ್ಯಾರೇಜ್ ಬಗ್ಗೆ ವಿವರಿಸುತ್ತಾರೆ.