ಈ ವರ್ಷದಾಂತ್ಯಕ್ಕೆ ಸರ್ಕಾರದ ಮುಖ್ಯಸ್ಥರು (ಪ್ರಧಾನಿ ಅಥವಾ ಅಧ್ಯಕ್ಷ) ಪಾಲ್ಗೊಳ್ಳುವ 19 ನೇ ಎಸ್‌ಸಿಒ (ಶಾಂಘೈ ಸಹಕಾರ ಸಂಘಟನೆ) ಶೃಂಗಸಭೆಯನ್ನು ಭಾರತ ಆಯೋಜಿಸಲಿದೆ. "ರೂಢಿಯಿಂದ ಬಂದಿರುವ ನಡಾವಳಿ ಮತ್ತು ಕಾರ್ಯವಿಧಾನದಂತೆ ಎಸ್ ಸಿ ಒ ಶೃಂಗಸಭೆಗೆ ಎಲ್ಲಾ ಎಂಟು ಸದಸ್ಯ ದೇಶಗಳು, ಹಾಗೆಯೇ ನಾಲ್ಕು ವೀಕ್ಷಕ ರಾಷ್ಟ್ರಗಳು ಹಾಗೂ ಇತರೆ ಅಂತರರಾಷ್ಟ್ರೀಯ ಸಂಧಾನ ಪಾಲುದಾರರಿಗೆ ಆಹ್ವಾನ ನೀಡಲಾಗುವುದು" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂ ಇ ಎ) ವಕ್ತಾರರು ಜನವರಿ 16 ರಂದು ಹೇಳಿಕೆ ನೀಡಿದ್ದರು.
ಇಂದು ವಿಶ್ವದಾದ್ಯಂತ ನೀತಿ ನಿರೂಪಕರು, ' ಎ ಬಿ ಸಿ ' ಸವಾಲನ್ನು ಎದುರಿಸುತ್ತಿದ್ದಾರೆ. ‘ಎ‘ ಎಂದರೆ ರಾಜತಾಂತ್ರಿಕ ವಿಧಿ- ವಿಧಾನ ಅಥವಾ ನಾಜೂಕಿನ ಹೆಜ್ಜೆ ಇಡಲು ಸ್ವಲ್ಪವೂ ಸಮಯ ಮತ್ತು ತಾಳ್ಮೆ ಇಲ್ಲದ ಪಾದರಸದಂತಹ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅನಿರೀಕ್ಷಿತ ನಿರ್ಧಾರ ಕೈಗೊಳ್ಳುತ್ತಿರುವ ಅಮೆರಿಕ. ರಿಪಬ್ಲಿಕ್ ಪಕ್ಷದ ಮತ ಬ್ಯಾಂಕಿನತ್ತ ದೃಷ್ಟಿ ನೆಟ್ಟಿರುವ ಟ್ರಂಪ್ ಮರಳಿ ತನ್ನ ವಿರೋಧಿಗಳನ್ನು ಮತ್ತು ಮಿತ್ರರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುತ್ತಿದ್ದಾರೆ.
' ಬಿ ' ಎಂದರೆ ಬ್ರೆಕ್ಸಿಟ್. ಜನವರಿ 31ರಂದು ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬೀಳುವುದಕ್ಕೆ ನಿರ್ಣಾಯಕ ಮೊಹರು ಬೀಳುವುದು ಬಹುತೇಕ ಖಚಿತ ಆಗಿದೆ. ಉತ್ತರಿಸಲು ಸಾಧ್ಯ ಇಲ್ಲದ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಬ್ರೆಕ್ಸಿಟ್. ಶಾಂಘೈ ಸಹಕಾರ ಸಂಘಟನೆಯ ಮತ್ತೊಂದು ಸದಸ್ಯ ದೇಶ ಆಗಿರುವ ಪಾಕಿಸ್ತಾನಕ್ಕೆ ಕೂಡ ಭಾರತ ಆಹ್ವಾನ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದು ಅನೇಕ ವೀಕ್ಷಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಏಕೆಂದರೆ ತನ್ನ ನೆಲದಿಂದ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಇಸ್ಲಾಮಾಬಾದ್ ‘ನಂಬಲರ್ಹ, ಶಾಶ್ವತ ಹಾಗೂ ಪರಿಶೀಲನೆ ಸಾಧ್ಯ ಇರುವ’ ಕ್ರಮ ಕೈಗೊಳ್ಳಬೇಕಿತ್ತು ಎಂಬ ನಿಲುವು ಭಾರತದ್ದಾಗಿತ್ತು. ಇದರ ಹೊರತಾಗಿಯೂ, ಅರ್ಥಪೂರ್ಣ ಮಾತುಕತೆಯನ್ನು ಪುನಾರಂಭಿಸುವ ಸಲುವಾಗಿ ಅನುಕೂಲಕರ ವಾತಾವರಣ ಕಲ್ಪಿಸಲು ಭಾರತ ಹೊರಟಿರುವಂತೆ ಇದೆ. ಭಾರತ ಇದ್ದಕ್ಕಿದ್ದಂತೆ ತನ್ನ ಜಾಡು ಬದಲಿಸಿತೆ? ಅದಕ್ಕೆ ಕಾರಣವಾದ ಒತ್ತಡಗಳು ಏನು? ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತಕ್ಕೆ ಭೇಟಿ ನೀಡುತ್ತಾರೆಯೇ? ಸಾಕಷ್ಟು ಪ್ರಶ್ನೆಗಳು ಗಿರಕಿ ಹೊಡೆಯುತ್ತಿವೆ. ಅದರಂತೆ ಸಂದರ್ಭೌಚಿತ್ಯದ ಅವಶ್ಯಕತೆ ಕೂಡ ಇದೆ.
ಇದರಿಂದ ಐರೋಪ್ಯ ಒಕ್ಕೂಟ ಬಲಗೊಳ್ಳಬಹುದೇ ಅಥವಾ ಪತನ ಆಗಬಹುದೆ, ಐರೋಪ್ಯ ಒಕ್ಕೂಟದ ಜೊತೆ ಬ್ರಿಟನ್ ಯಾವ ರೀತಿಯ ಆರ್ಥಿಕ ವ್ಯವಸ್ಥೆ ತಾಲೀಮು ನಡೆಸಲು ಸಾಧ್ಯ ಇದೆ; ಯುರೋ ಸದೃಢ ಆಗಲಿದೆಯೇ ಅಥವಾ ದುರ್ಬಲಗೊಳ್ಳುತ್ತದೆಯೇ? ಐರೋಪ್ಯ ಒಕ್ಕೂಟದ ಆರ್ಥಿಕತೆ ಮೇಲೆ ಬೀರುವ ಪರಿಣಾಮ ಎಂತಹುದು? ಮತ್ತು ಅಮೆರಿಕ ಮಿತ್ರಪಡೆಯಾದ ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ನಡೆ ಏನು? ಏಕೆಂದರೆ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರು ‘ಬ್ರೆಕ್ಸಿಟ್ ನಂತರ, ನ್ಯಾಟೋ ರಕ್ಷಣಾ ವೆಚ್ಚದ ಶೇ. 80ರಷ್ಟು ಪಾಲು ಐರೋಪ್ಯ ಒಕ್ಕೂಟ ಹೊರತಾದ ದೇಶಗಳಿಂದ ಬರಲಿದೆ’ ಎಂದು ತಿಳಿಸಿದ್ದಾರೆ.
‘ಸಿ' ಎಂದರೆ ಬೇರೇನೂ ಅಲ್ಲ; ಅದುವೇ ಚೀನಾ. ಚೀನಾದ ಅಭೂತಪೂರ್ವ ಪ್ರಗತಿ, ಮಹತ್ವಾಕಾಂಕ್ಷೆ ಮತ್ತು ಆಕ್ರಮಣಶೀಲತೆ ಭಾರತ- ಪೆಸಿಫಿಕ್ ಪ್ರದೇಶ ಮತ್ತು ಅದರಾಚೆಗಿನ ಸ್ಥಾಪಿತ ಭೌಗೋಳಿಕ-ರಾಜತಾಂತ್ರಿಕತೆಯ ಸರೋವರಕ್ಕೆ ಕಲ್ಲು ಹೊಡೆದಿದೆ. ಕಳೆದ 200 ವರ್ಷಗಳಲ್ಲಿ ಯಾವುದೇ ದೇಶದ ನೌಕಾಪಡೆ ಚೀನಾದಷ್ಟು ಬಲಗೊಂಡಿಲ್ಲ. ಭಾರತ ಸೇರಿದಂತೆ ಜಪಾನ್, ವಿಯೆಟ್ನಾಂ, ಫಿಲಿಪೈನ್ಸ್ ಹೀಗೆ ಅದರ ನೆರೆಹೊರೆಯ ದೇಶಗಳೊಟ್ಟಿಗೆ ಚೀನಾಕ್ಕೆ ತಕರಾರುಗಳು ಇವೆ. ಇದು ದಕ್ಷಿಣ ಚೀನಾ ಸಮುದ್ರ ಪ್ರದೇಶದ ದೊಡ್ಡ ಭಾಗವನ್ನು ನಿಯಂತ್ರಿಸುತ್ತಿದೆ ಮತ್ತು ಕರಾಚಿ, ಜಿಬೌಟಿಯಂತಹ ಹೊರದೇಶಗಳ ನಗರಗಳಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸುವಲ್ಲಿ ಮಗ್ನವಾಗಿದೆ. ಬೀಜಿಂಗ್, ತನ್ನ ಬೃಹತ್ ವಿದೇಶಿ ವಿನಿಮಯ ನಿಧಿಯನ್ನು ಚೆಲ್ಲಿ ಬಿ ಆರ್ ಐ ( ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್) ಮೂಲಕ ಹಲವಾರು ದೇಶಗಳನ್ನು ಸಾಲದ ಜಾಲದಲ್ಲಿ ಸಿಲುಕಿಸಿದೆ.
ಇದರ ಜೊತೆಗೆ ಭಾರತಕ್ಕೆ ಮಾತ್ರ ಹೆಚ್ಚುವರಿಯಾಗಿ ‘ಡಿ’ ಸವಾಲು ಎದುರಾಗಿದೆ. ಅದೇ ಡಾಸ್ಟರ್ಡ್ಲಿ ಟೆರರಿಸಂ ಅಥವಾ ಅಪಾಯಕಾರಿ ಭಯೋತ್ಪಾದನೆ. ಕಳೆದ ನಾಲ್ಕು ದಶಕಗಳಿಂದಲೂ, ನಮ್ಮ ನೆರೆಯ ಪಾಕಿಸ್ತಾನವನ್ನು ಅದರ ಆಪ್ತಮಿತ್ರ ಚೀನಾ ಪೋಷಿಸುತ್ತಿದೆ. ಭಾರತದ ಏಳಿಗೆಗೆ ಸಂಬಂಧಿಸಿದ ಸಾಮಾನ್ಯ ವಿಚಾರಗಳನ್ನು ಆ ಎರಡೂ ದೇಶಗಳು ಹಂಚಿಕೊಳ್ಳುತ್ತಿವೆ. ಎಲ್ಲಾ ವಿವಾದಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶಾಂತಿಯುತ ಸಹಬಾಳ್ವೆ ನಡೆಸಲು ಒಂದು ಮಾರ್ಗ ಕಂಡುಕೊಳ್ಳವುದಕ್ಕೆ ನವದೆಹಲಿ ಕಳೆದ 60 ವರ್ಷಗಳಿಂದ ಇಸ್ಲಾಮಾಬಾದ್ ಜೊತೆ ತಾಳ್ಮೆಯಿಂದ ಹೆಜ್ಜೆ ಇಡುತ್ತಿದೆ. ಆದರೂ, ಪಾಕಿಸ್ತಾನದ ಅಪ್ರಬುದ್ಧತೆ ಗಮನಿಸಿ, ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟೊಟ್ಟಿಗೆ ಸಾಗುವುದು ಸಾಧ್ಯ ಇಲ್ಲವೆಂದು ಭಾರತ ತೀರ್ಮಾನಿಸಿದೆ. ಅದಕ್ಕಾಗಿಯೇ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರ ಜನವರಿ 16 ರ ಹೇಳಿಕೆ ಕೆಲವರ ಆಶ್ಚರ್ಯಕ್ಕೆ ಕಾರಣ ಆಯಿತು.
ಚೀನಾ ನೇತೃತ್ವದ ಶಾಂಘೈ ಸಹಕಾರ ಸಂಘಟನೆ 2001ರಲ್ಲಿ ಸ್ಥಾಪನೆ ಆಯಿತು ಎಂದು ಇಲ್ಲಿ ಸ್ಮರಿಸಬಹುದು. ಇದರಲ್ಲಿ ರಷ್ಯಾ, ಉಜ್ಬೆಕಿಸ್ತಾನ್, ಕಜಕಿಸ್ತಾನ್, ತಜಿಕಿಸ್ತಾನ್ ಹಾಗೂ ಕಿರ್ಗಿಸ್ತಾನ್ ಕೂಡ ಸೇರಿವೆ. ಸದಸ್ಯ ರಾಷ್ಟ್ರಗಳಲ್ಲಿ ರಾಜಕೀಯ, ಭದ್ರತೆ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಹಕಾರ ವೃದ್ಧಿಸುವ ಉದ್ದೇಶದಿಂದ ಇದನ್ನು ನ್ಯಾಟೋಗೆ ಪ್ರತಿರೂಪ ಎಂಬಂತೆ ಬಿಂಬಿಸಲಾಗಿತ್ತು. 2017 ರಲ್ಲಿ ರಷ್ಯಾದ ಬೆಂಬಲದೊಂದಿಗೆ ಭಾರತ ಮತ್ತು ಚೀನಾ ಒತ್ತಾಸೆಯೊಂದಿಗೆ ಪಾಕಿಸ್ತಾನ ಎಸ್ ಸಿ ಒದ ಪೂರ್ಣ ಸದಸ್ಯತ್ವ ಪಡೆದವು.
ಬಹುತೇಕ ಈ ವರ್ಷದ ದ್ವಿತೀಯಾರ್ಧದಲ್ಲಿ ಸರ್ಕಾರದ ಮುಖ್ಯಸ್ಥರು ಪಾಲ್ಗೊಳ್ಳಲಿರುವ ಈ ಶೃಂಗಸಭೆಯನ್ನು ಭಾರತ ಮೊದಲ ಬಾರಿಗೆ ಆಯೋಜಿಸಲಿದೆ. ಪಾಕಿಸ್ತಾನ ಆಹ್ವಾನಿಸುವುದನ್ನು ಹೊರತುಪಡಿಸಿದರೆ ಭಾರತಕ್ಕೆ ಹೆಚ್ಚಿನ ಆಯ್ಕೆಗಳಿಲ್ಲ. ಒಂದು ವೇಳೆ ಹಾಗೆ ಮಾಡದಿದ್ದರೆ ಇಡೀ ಶೃಂಗಸಭೆಯನ್ನೇ ರದ್ದುಗೊಳಿಸಬೇಕಾದೀತು. ಈ ಮಹತ್ವದ ಗುಂಪಿನಲ್ಲಿ ಭಾರತವು ರಚನಾತ್ಮಕ ಮತ್ತು ಸಕಾರಾತ್ಮಕ ಪಾತ್ರವನ್ನು ವಹಿಸಲು ಬದ್ಧವಾಗಿದೆ ಮತ್ತು ಅನಗತ್ಯ ಅಲ್ಲೋಲ- ಕಲ್ಲೋಲ ಉಂಟುಮಾಡಲು ಬಯಸದು. ರಷ್ಯಾದೊಂದಿಗಿನ ಸಹಭಾಗಿತ್ವವನ್ನು ಇನ್ನಷ್ಟು ಗಾಢವಾಗಿಸಲು, ಚೀನಾವನ್ನು ತೊಡಗಿಸಿಕೊಳ್ಳಲು ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ತನ್ನ ಪ್ರಭಾವ ವಿಸ್ತರಿಸಲು ನವದೆಹಲಿ ಉತ್ಸುಕವಾಗಿದೆ.
ಆಹ್ವಾನದಂತೆ ಪ್ರಧಾನಿ ಇಮ್ರಾನ್ ಖಾನ್ ಭಾರತಕ್ಕೆ ಭೇಟಿ ನೀಡುವ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ ಎಂಬುದು ಲೇಖಕನಾದ ನನ್ನ ನಂಬಿಕೆ. ಅವರು ಭವ್ಯವಾಗಿ ಮತ್ತು ಶಾಂತಿಯ ಧಿರಿಸು ತೊಟ್ಟು ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅನ್ನಿಸುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಚೀನಾ ಪದೇ ಪದೇ ಪ್ರಸ್ತಾಪಿಸುತ್ತಿರುವ ಹಿಂದಿನ ಮುಖ್ಯ ಉದ್ದೇಶ ಎಂದರೆ ಪಾಕಿಸ್ತಾನದೊಂದಿಗೆ ಭಾರತ ಮಾತುಕತೆಗೆ ಮುಂದಾಗಬೇಕು ಎಂದು ಒತ್ತಡ ಹೇರುವುದಾಗಿದೆ. ಉಗ್ರರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಜಾಗತಿಕ ಮಟ್ಟದ ಸಂಸ್ಥೆಯಾದ ಹಣಕಾಸು ಕಾರ್ಯಪಡೆ- ಎಫ್‌ಎಟಿಎಫ್ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಈ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಆರ್ಥಿಕ ಆರೋಗ್ಯದಲ್ಲಿ ಚೇತರಿಕೆ ಕಾಣಲು ಇಸ್ಲಾಮಾಬಾದ್ ‘ಎಲ್ಲರೂ ಮೆಚ್ಚಿ ಅಹುದಹುದು’ ಎನ್ನಬೇಕಾದ ಕೆಲಸ ಮಾಡಬೇಕಾಗುತ್ತದೆ. ಇದು ಸಾಧ್ಯವಾದರೆ ಭಾರತದ ವಿರುದ್ಧ ಭಯೋತ್ಪಾದಕ ಸಂಚುಗಳನ್ನು ರೂಪಿಸುವ ಅದರ ಯತ್ನಗಳು ತಿರುವು-ಮುರುವು ಆಗಲಿವೆ.
ಪಾಕಿಸ್ತಾನದೊಂದಿಗೆ ಆತುರದ ಮಾತುಕತೆ ಆರಂಭಿಸುವ ಅನಿವಾರ್ಯತೆಗೆ ಒಳಗಾಗುವುದಾಗಲೀ ಅಥವಾ ಅದನ್ನು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಗೆ ಅದನ್ನು ಆಹ್ವಾನಿಸುವುದಾಗಲೀ ಎರಡೂ ಎಸ್ ಸಿ ಒ ಸದಸ್ಯತ್ವಕ್ಕೆ ಭಾರತ ತೆರಬೇಕಾದ ಬೆಲೆ ಆಗಲಿದೆ. ಆದರೂ ಇದನ್ನು ಸರಿದೂಗಿಸಲೆಂಬಂತೆ ಸದಸ್ಯತ್ವದ ಪ್ರಯೋಜನ ಬಳಸಿಕೊಂಡು ಭಾರತಕ್ಕೆ ಒದಗಲಿರುವ ರಾಜಕೀಯ ಮತ್ತು ಆರ್ಥಿಕ ನಷ್ಟ ತಡೆಯಬಹುದಾಗಿದೆ.
ಲೇಖಕರು: ವಿಷ್ಣು ಪ್ರಕಾಶ್ - ದಕ್ಷಿಣ ಕೊರಿಯಾ ಮತ್ತು ಕೆನಡಾದ ಮಾಜಿ ರಾಯಭಾರಿ ಮತ್ತು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ