ಹೈದಾರಾಬಾದ್ (ತೆಲಂಗಾಣ) : ದೆಹಲಿಯ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ) ವಿರುದ್ಧ ಕಳೆದ 50 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕಲು ಕೇಂದ್ರ ಸರ್ಕಾರ ಭದ್ರತಾ ಪಡೆಗಳನ್ನು ಬಳಸಬಹುದು ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಫೆ.8ರ ಬಳಿಕ ಸರ್ಕಾರ, ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ತೆರವುಗೊಳಿಸುವ ಸಾಧ್ಯತೆಗಳಿವೆ ಎಂದಿದ್ದಾರೆ.
ಅಲ್ಲದೆ ಭದ್ರತಾ ಪಡೆಗಳು ಅಲ್ಲಿ ಗುಂಡು ಹಾರಿಸಬಹುದು, ಮತ್ತು ಶಾಹೀನ್ ಬಾಗ್ನ್ನು ಜಲಿಯನ್ ವಾಲಾ ಬಾಗ್ ಆಗಿ ಪರಿವರ್ತಿಸಬಹುದು. ಶೂಟ್ ಮಾಡುವಂತೆ ಬಿಜೆಪಿ ಸಚಿವರೊಬ್ಬರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಇದಕ್ಕೆಲ್ಲ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಎನ್ ಆರ್ಸಿ ಮತ್ತು ಎನ್ಪಿಆರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, 2024ರವರೆಗೆ ಎನ್ಆರ್ಸಿ ಜಾರಿಗೊಳಿಸುವುದಿಲ್ಲ ಎಂಬುವುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಎನ್ಪಿಆರ್ಗೆ 39 ಸಾವಿರ ಕೋಟಿ ಯಾಕೆ ಅವರು ವ್ಯಯಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಹಿಟ್ಲರ್ ತನ್ನ ಆಡಳಿತದಲ್ಲಿ ಇದೇ ರೀತಿ ಎರಡು ಸಲ ಗಣತಿ ಮಾಡಿದ್ದ, ಬಳಿಕ ಯಹೂದಿಗಳನ್ನು ಗ್ಯಾಸ್ ಚೇಂಬರ್ ಒಳಗೆ ಬಂಧಿಸಿ ಹತ್ಯೆ ಮಾಡಿದ್ದ. ನಾನು ಇತಿಹಾಸದ ವಿದ್ಯಾರ್ಥಿಯಾಗಿದ್ದು ನನಗದು ಗೊತ್ತಿದೆ. ನಮ್ಮ ದೆಶ ಆ ರೀತಿ ಆಗಲು ನಾನು ಬಯಸುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.