ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ( NIA) ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ AIMIM ಮುಖಂಡ ಹಾಗೂ ಸಂಸದ ಅಸಾವುದ್ದೀನ್ ಓವೈಸಿ ನಡುವೆ ಮಾತಿಕ ಚಕಮಕಿ ನಡೆದಿದೆ.
ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, ಹೈದರಾಬಾದ್ ನಗರ ಭಯೋತ್ಪಾದನೆಯ ವಾಸ ಸ್ಥಳ ಎಂಬ ಹೇಳಿಕೆ ನೀಡುತ್ತಿದ್ದಂತೆ ಅಸಾವುದ್ದೀನ್ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಈ ದೇಶಕ್ಕೆ ಸೇರಿದವನಾ ಅಥವಾ ಭಯೋತ್ಪಾದಕರೊಂದಿಗೆ ಇದ್ದವನಾ, ಇದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಅಮಿತ್, ಮೊದಲು ಹೇಳುವುದನ್ನ ಕೇಳಿರಿ ಓವೈಸಿ ಸಾಹೇಬ್, ಇದು ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಒಂದು ಬೆರಳು ಬೇರೆಯವರತ್ತ ತೋರಿಸಿದಾಗ ಉಳಿದ ನಾಲ್ಕು ಬೆರಳು ನಮ್ಮ ಕಡೆ ತೋರಿಸುತ್ತಿರುತ್ತವೆ ಎಂಬುದನ್ನ ಓವೈಸಿ ಮರೆಯಬಾರದು ಎಂದು ಇದೇ ವೇಳೆ ಅಮಿತ್ ಶಾ ಸರಿಯಾಗೇ ಓವೈಸಿಗೆ ಟಾಂಗ್ ಕೊಟ್ಟರು.
ಇನ್ನು ಅಮಿತ್ ಶಾ ಹೇಳಿಕೆಗೆ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಓವೈಸಿ, ಬಿಜೆಪಿಗೆ ಯಾರು ಸಪೋರ್ಟ್ ಮಾಡುವುದಿಲ್ಲವೋ ಅವರು ರಾಷ್ಟ್ರ ವಿರೋಧಿಗಳು. ದೇಶದಲ್ಲಿ ರಾಷ್ಟ್ರವಾದಿಗಳು ಹಾಗೂ ರಾಷ್ಟ್ರ ವಿರೋಧಿಗಳು ಎಂಬ ಶಾಪ್ ಬಿಜೆಪಿಯಿಂದ ಓಪನ್ ಆಗಿದೆ. ಸದನದಲ್ಲಿ ಬೆರಳು ತೋರಿಸಿ ಮಾತನಾಡುವ ಮೂಲಕ ಅವರು ನನಗೆ ಬೆದರಿಕೆ ಹಾಕಿದ್ದಾರೆ. ಅವರು ಓರ್ವ ಗೃಹ ಮಂತ್ರಿ ಹೊರತು ದೇವರಲ್ಲ ಎಂದು ತಿರುಗೇಟು ನೀಡಿದ್ದಾರೆ.