ಇತ್ತೀಚೆಗೆ ಯಾಕೋ ಲೈಂಗಿಕಾಸಕ್ತಿ ಕಡಿಮೆಯಾಗುತ್ತಿದೆ ಎನಿಸುತ್ತಿದೆಯಾ? ಮೊದಲಿನಂತೆ ರತಿಕ್ರೀಡೆಯಲ್ಲಿ ರುಚಿ ಉಳಿದಿಲ್ಲವಲ್ಲ ಎಂದು ಕಳವಳವಾಗುತ್ತಿದೆಯಾ? ಗಾಬರಿಯಾಗಬೇಡಿ... ಈ ಸಮಸ್ಯೆಯಿಂದ ಬಳಲುತ್ತಿರುವವರು ನೀವೋಬ್ಬರೇ ಅಲ್ಲ. ಲಾಕ್ಡೌನ್ ಪರಿಣಾಮದಿಂದ ಜಗತ್ತಿನಲ್ಲಿ ಹಲವಾರು ಜನ ಲೈಂಗಿಕಾಸಕ್ತಿ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಕೊರೊನಾ ವೈರಸ್ನಿಂದ ಆರೋಗ್ಯ ಸಮಸ್ಯೆ ಉಂಟಾಗಿದ್ದು ನಿಜ. ಆದರೆ ಕೊರೊನಾ ಲಾಕ್ಡೌನ್ ಸಹ ಸಾಕಷ್ಟು ಸೈಡ್ ಎಫೆಕ್ಟ್ಗಳನ್ನು ಮಾಡಿದೆ!
ಸಾಮಾನ್ಯವಾಗಿ ಆರೋಗ್ಯವಾಗಿದ್ದವರು ಒಮ್ಮೆಲೇ ಲೈಂಗಿಕಾಸಕ್ತಿ ಕಳೆದುಕೊಳ್ಳಲು ಕಾರಣವೇನೆಂದು ತಿಳಿಯಲು ಈಟಿವಿ ಭಾರತ್ ಸುಖೀಭವ ವಿಭಾಗವು ಖ್ಯಾತ ಆ್ಯಂಡ್ರಾಲಾಜಿಸ್ಟ್ ಡಾ. ರಾಹುಲ್ ರೆಡ್ಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಲಾಕ್ಡೌನ್ ಸಮಯದಲ್ಲಿ ವಿಶೇಷವಾಗಿ ಪುರುಷರ ಲೈಂಗಿಕಾಸಕ್ತಿ ಕುಂದಲು ಪ್ರಮುಳ ಕಾರಣಗಳನ್ನು ಡಾ. ರೆಡ್ಡಿ ವಿವರಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಒಟ್ಟು 4 ಪ್ರಮುಖ ಕಾರಣಗಳಿಂದ ಪುರುಷರ ಲೈಂಗಿಕಾಸಕ್ತಿ ಕಡಿಮೆಯಾಗಿದ್ದು, ಅವು ಹೀಗಿವೆ:
- ಮಾನಸಿಕ ಒತ್ತಡ ಹಾಗೂ ಉದ್ವೇಗ
- ವ್ಯಾಯಾಮ ಮಾಡದಿರುವುದು
- ಅತಿಯಾದ ಅಲ್ಕೊಹಾಲ್ ಸೇವನೆ
- ವಿಟಮಿನ್ ಡಿ ಕೊರತೆ
ಲಾಕ್ಡೌನ್ ಅವಧಿಯಲ್ಲಿನ ಭಾವನಾತ್ಮಕ ಅಸುರಕ್ಷತೆಯ ಒತ್ತಡದಿಂದ ಅನೇಕ ಪುರುಷರಲ್ಲಿ ಉದ್ವೇಗದ ಮನಸ್ಥಿತಿ ಉಂಟಾಗಿದೆ. ಒತ್ತಡದಿಂದ ಪುರುಷರ ದೇಹದಲ್ಲಿ ಸೆಕ್ಸ್ ಹಾರ್ಮೋನ್ ಟೆಸ್ಟೊಸ್ಟಿರಾನ್ ಬಿಡುಗಡೆ ಕಡಿಮೆಯಾಗಿ ಪ್ರೊಲ್ಯಾಕ್ಟಿನ್ ಪ್ರಮಾಣ ಹೆಚ್ಚಾಗುತ್ತದೆ. ಪ್ರೊಲ್ಯಾಕ್ಟಿನ್ ಹೆಚ್ಚಾದಷ್ಟೂ ಪುರುಷರಲ್ಲಿ ಸೆಕ್ಸ್ ವಾಂಛೆ ಕಡಿಮೆಯಾಗಲಾರಂಭಿಸುತ್ತದೆ. ಇದರಿಂದ ನಿಮಿರುವಿಕೆಯ ಸಾಮರ್ಥ್ಯ ಕುಂದುತ್ತದೆ. ಹೀಗಾಗಿಯೇ ಬಹುತೇಕ ಪುರುಷರು ಲೈಂಗಿಕಾಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ದಿನನಿತ್ಯ ನಾವು ಸಾಕಷ್ಟು ದೈಹಿಕ ಕೆಲಸ ಮಾಡುತ್ತಿದ್ದರೂ ಲಾಕ್ಡೌನ್ ಮುಂಚೆ ವ್ಯಾಯಾಮವನ್ನೂ ಮಾಡುತ್ತಿದ್ದೆವು. ಆದರೆ ಲಾಕ್ಡೌನ್ ನಂತರ ವ್ಯಾಯಾಮ ಚಟುವಟಿಕೆಗಳು ಕಡಿಮೆಯಾಗಿ ಲೈಂಗಿಕ ಶಕ್ತಿ ಕುಂದುವಂತಾಗಿದೆ. ಒಟ್ಟಾರೆ ಆರೋಗ್ಯಕ್ಕೆ ಪುರುಷ ಹಾಗೂ ಮಹಿಳೆಯರಿಬ್ಬರೂ ನಿತ್ಯ ವ್ಯಾಯಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಬಹಳ ಅಗತ್ಯ.
ಪ್ರಸ್ತುತ ಬಹುತೇಕ ನಾವೆಲ್ಲರೂ ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದೇವೆ. ಇನ್ನು ಕೆಲವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಮನೆಯಲ್ಲಿ ಹೆಚ್ಚಿನ ಬಿಡುವಿನ ಸಮಯ ಸಿಗುತ್ತಿರುವುದರಿಂದ ಕೆಲ ಪುರುಷರ ಅಲ್ಕೊಹಾಲ್ ಸೇವನೆ ಹೆಚ್ಚಾಗಿರುವುದು ಕಂಡುಬಂದಿದೆ. ಲಾಕ್ಡೌನ್ ಮುನ್ನ ಯಾವಾಗಲೋ ಒಂದು ಸಾರಿ ಹೊರಗಡೆ ಗೆಳೆಯರ ಜೊತೆ ಪಾರ್ಟಿ ಮಾಡುತ್ತಿದ್ದವರು ಈಗ ನಿಯಮಿತವಾಗಿ ಕುಡಿಯಲಾರಂಭಿಸಿದ್ದಾರೆ. ಅತಿಯಾದ ಅಲ್ಕೊಹಾಲ್ ಸೇವನೆಯಿಂದ ಪುರುಷರಲ್ಲಿ ಈಸ್ಟ್ರೋಜೆನ್ ಹಾರ್ಮೋನ್ ಬಿಡುಗಡೆ ಹೆಚ್ಚಾಗುತ್ತದೆ. ಇದು ನಿಮಿರುವಿಕೆಯ ಸಾಮರ್ಥ್ಯ ಕುಂದುತ್ತದೆ.
ದೇಹದಲ್ಲಿ ವಿಟಮಿನ್ ಡಿ ಕೊರತೆಯೂ ಪುರುಷರ ನಿಮಿರುವಿಕೆ ಕುಗ್ಗಲು ಕಾರಣವಾಗಿದೆ. ಕೊರೊನಾ ವೈರಸ್ ಭೀತಿ ಹಾಗೂ ವರ್ಕ್ ಫ್ರಮ್ ಹೋಮ್ ಕಾರಣಗಳಿಂದ ಇತ್ತೀಚೆಗೆ ಮನೆಯಿಂದ ಹೊರಗೆ ಹೋಗುವುದೇ ಕಡಿಮೆಯಾಗಿದೆ. ಹಗಲು ಹೊತ್ತಿನಲ್ಲಿ ಹೊರಗೆ ಹೋಗದೆ, ಸೂರ್ಯನ ಬಿಸಿಲು ಶರೀರಕ್ಕೆ ತಾಕದ್ದರಿಂದ ವಿಟಮಿನ್ ಡಿ ಕೊರತೆ ಕಾಡುತ್ತಿದೆ. ಇದೂ ಸಹ ಪುರುಷರ ಲೈಂಗಿಕ ಕಾಮನೆ ಕುಗ್ಗುವುದಕ್ಕೆ ಪ್ರಮುಖ ಕಾರಣವಾಗಿದೆ.
ನಿಮಿರುವಿಕೆ ಹಾಗೂ ಲೈಂಗಿಕಾಸಕ್ತಿ ಕೊರತೆಯ ಸಮಸ್ಯೆಯಿಂದ ಆಸ್ಪತ್ರೆಗೆ ಬರುವವರಲ್ಲಿ ಇವೇ ನಾಲ್ಕು ಅಂಶಗಳು ಪ್ರಮುಖವಾಗಿ ಕಂಡು ಬಂದಿವೆ. ಸಮತೋಲಿತ ಆಹಾರ, ನಿತ್ಯ ವ್ಯಾಯಾಮ, ಉತ್ತಮ ನಿದ್ರೆ ಹಾಗೂ ಒಂದಿಷ್ಟು ಚಿಕಿತ್ಸೆ (ಅಗತ್ಯವಿದ್ದರೆ) ಪಡೆದುಕೊಂಡರೆ ಎಲ್ಲರೂ ಆರೋಗ್ಯಕರ ಹಾಗೂ ಸುಖಿ ಸೆಕ್ಸ್ ಜೀವನ ತಮ್ಮದಾಗಿಸಿಕೊಳ್ಳಬಹುದು ಎಂದು ಡಾ. ರೆಡ್ಡಿ ಮಾಹಿತಿ ನೀಡಿದರು.
ಈ ಕುರಿತು ನಿಮ್ಮಲ್ಲಿ ಪ್ರಶ್ನೆಗಳಿದ್ದಲ್ಲಿ ಡಾ. ರಾಹುಲ್ ರೆಡ್ಡಿ ಅವರನ್ನು ಕೆಳಗಿನ ಇಮೇಲ್ ಐಡಿ ಮೂಲಕ ಸಂಪರ್ಕಿಸಬಹುದು:
andrologistdoctor@gmail.com