ಉತ್ತರ ಪ್ರದೇಶ: ಇಲ್ಲಿನ ಹಥ್ರಾಸ್ ಬಳಿಯ ಯಮುನಾ ಎಕ್ಸ್ಪ್ರೆಸ್ ವೇ ಯಲ್ಲಿ ದಡ್ಡ ಮಂಜಿನ ಕಾರಣ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಸುಮಾರು 7ರಿಂದ 8 ವಾಹನಗಳು ಅಪಘಾತಕ್ಕೆ ಒಳಗಾಗಿವೆ. ಈ ಘಟನೆ ಕುರಿತು ಮಾಹಿತಿ ಬಂದ ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ರಸ್ತೆ ಮಧ್ಯೆ ಸಿಲುಕಿದ್ದ ವಾಹನಗಳನ್ನು ಕ್ರೇನ್ ಸಹಾಯದಿಂದ ತೆರವುಗೊಳಿಸಿ, ಶವಗಳನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಘಟನೆ ಕುರಿತು ಮಾತನಾಡಿರುವ ಹಥ್ರಾಸ್ನ ಸದಾಬಾದ್ ಠಾಣೆ ಎಸ್ಪಿ ವಿನೀತ್ ಜೈಸ್ವಾಲ್, ಇಲ್ಲಿನ ಮಿಧಾವಾಲಿ ಗ್ರಾಮದ ಸಮೀಪ ಹಾದು ಹೋಗುವ ಯಮುನಾ ಎಕ್ಸ್ಪ್ರೆಸ್ ವೇ ನಲ್ಲಿ ದಟ್ಟ ಮಂಜು ಕವಿದಿದ್ದ ಕಾರಣ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.