ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಏಳನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಮಧ್ಯಾಹ್ನ 12 ಗಂಟೆಗೆ ಪೂರ್ವ ಲಡಾಖ್ನ ಚುಶುಲ್‌ನಲ್ಲಿ ನಡೆಯಲಿದೆ.
ಇಂದಿನ ಸಭೆಯಲ್ಲಿ ಕಾರ್ಪ್ಸ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಇವರ ಮುಂದಿನ ಉತ್ತರಾಧಿಕಾರಿ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪೂರ್ವ ಲಡಾಖ್ ವಲಯದಲ್ಲಿ ನಿಯೋಜನೆಗೊಂಡಿರುವ ತಮ್ಮ ಸೈನಿಕರನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವಂತೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯನ್ನು ಭಾರತ ಒತ್ತಾಯಿಸಲಿದೆ. ಪಾಂಗೊಂಗ್ ಸರೋವರದ ಬಳಿ ನಡೆದ ಸಂಘರ್ಷದ ಕುರಿತು ಸಹ ಉಭಯ ರಾಷ್ಟ್ರಗಳು ಚರ್ಚೆ ನಡೆಸಲಿವೆ.
ಭಾರತ-ಚೀನಾ ನಡುವೆ ಈಗಾಗಲೇ ಆರು ಬಾರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ. ಇದು 7ನೇ ಸುತ್ತಿನ ಸಭೆಯಾಗಿದೆ. ಇದಕ್ಕೂ ಮೊದಲು ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2 ಹಾಗೂ ಸೆಪ್ಟೆಂಬರ್ 21 ರಂದು ಸಭೆಗಳು ನಡೆದಿದ್ದವು. ಕಳೆದ ಬಾರಿ ಪೂರ್ವ ಲಡಾಖ್ನ ಮೋಲ್ಡೋದಲ್ಲಿ ನಡೆದಿದ್ದ 6ನೇ ಸುತ್ತಿನ ಸಭೆಯಲ್ಲಿ ಉಭಯ ದೇಶಗಳ ಅಧಿಕಾರಿಗಳು ಸುಮಾರು 13 ಗಂಟೆ ಕಾಲ ಮಾತುಕತೆ ನಡೆಸಿದ್ದರು.